IPL 2025: ಪಂಜಾಬ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ – 4ನೇ ಬಾರಿಗೆ ಫೈನಲ್‌ಗೆ ಲಗ್ಗೆ

Public TV
2 Min Read

ಚಂಡೀಗಢ: ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿಲ್‌ ಸಾಲ್ಟ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. 27 ಬಾಲ್‌ಗಳಿಗೆ 6 ಫೋರ್‌, 3 ಸಿಕ್ಸರ್‌ನೊಂದಿಗೆ 56 ರನ್‌ (ಔಟಾಗದೇ) ಗಳಿಸಿ ಮಿಂಚಿದರು. ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19, ರಜತ್‌ ಪಾಟೀದಾರ್‌ 15 ರನ್‌ (ಔಟಾಗದೇ) ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಜಯ ಸಾಧಿಸಿತು.

ಕ್ವಾಲಿಫೈಯರ್‌ 1 ಮ್ಯಾಚ್‌ನಲ್ಲಿ ಪಂಜಾಬ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಶ್ರೇಯಸ್‌ ಅಯ್ಯರ್‌ ಪಡೆ ಮೊದಲ ಪವರ್‌ಪ್ಲೇನಲ್ಲೇ ಪ್ರಮುಖ 48 ರನ್‌ ಇದ್ದಾಗ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಇದನ್ನೂ ಓದಿ: ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8 ರನ್‌ನ ಒಂದಂಕಿ ಆಟದಿಂದ ನಿರಾಸೆ ಮೂಡಿಸಿದರು. ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಕೊನೆಗೆ ಪಂಜಾಬ್‌ 14.1 ಓವರ್‌ಗೆ 101 ರನ್‌ ಗಳಿಸಿ ಆಲೌಟ್‌ ಆಯಿತು.

ಆರ್‌ಸಿಬಿ ಪರ ಬೌಲರ್‌ಗಳು ಮಿಂಚಿದರು. ತಂಡಕ್ಕೆ ಮತ್ತೆ ಮರಳಿದ ಜೋಶ್‌ ಹ್ಯಾಜಲ್‌ವುಡ್‌ ತಮ್ಮ ಮಾರಕ ಬೌಲಿಂಗ್‌ ಪ್ರದರ್ಶನ ತೋರಿದರು. ಹ್ಯಾಜಲ್‌ವುಡ್‌ ಮತ್ತು ಸುಯೇಶ್‌ ಶರ್ಮಾ ತಲಾ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಯಶ್‌ ದಯಾಳ್‌ 2, ಭುವನೇಶ್ವರ್‌ ಕುಮಾರ್‌ ಮತ್ತು ರೊಮಾರಿಯೊ ಶೆಫರ್ಡ್ ತಲಾ 1 ವಿಕೆಟ್‌ ಕಿತ್ತರು.

Share This Article