ಚಿನ್ನಸ್ವಾಮಿಗೆ 4 ಕೋಟಿ ವೆಚ್ಚದಲ್ಲಿ ಆರ್‌ಸಿಬಿಯಿಂದ 350 AI ಕ್ಯಾಮೆರಾ – ಬೆಂಗಳೂರಿನಲ್ಲೇ ಪಂದ್ಯ?

2 Min Read

ಬೆಂಗಳೂರು: ಈ ಬಾರಿಯ ಐಪಿಎಲ್‌ ಪಂದ್ಯ ಬೆಂಗಳೂರಿಂದ (Bengaluru) ಹೊರಗಡೆ ಹೋಗುತ್ತಾ ಎಂಬ ಪ್ರಶ್ನೆಯ ಮಧ್ಯೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಕೃತಕ ಬುದ್ಧಿಮತ್ತೆ(AI) ಕ್ಯಾಮೆರಾ ಅಳವಡಿಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮುಂದಾಗಿದೆ.

ಹೌದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಕ್ರಿಕೆಟ್‌ ಆಯೋಜನೆ ಮಾಡುವ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (KSCA) ಕರ್ನಾಟಕ ಸರ್ಕಾರ ಮತ್ತು ಆರ್‌ಸಿಬಿ ಮ್ಯಾನ್ಮೆಜ್‌ಮೆಂಟ್‌ ಜೊತೆ ಹಲವು ಸುತ್ತಿನ ಮಾತುಕತೆ ನಡೆಸುತ್ತಿದೆ.

ಮಾತುಕತೆ ಸಂದರ್ಭದಲ್ಲಿ ಸರ್ಕಾರದ ಅಧಿಕಾರಿಗಳು ಜನಸಂದಣಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದರು. ಅದರಂತೆ ಈಗ ಕ್ರಿಕೆಟ್‌ ಮೈದಾನದ ಸುತ್ತಲು ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಸುಮಾರು 300 ರಿಂದ 350 ಎಐ ಕ್ಯಾಮೆರಾ ಅಳವಡಿಸುವ ಪ್ರಸ್ತಾಪವನ್ನು ಕೆಎಸ್‌ಸಿಎಗೆ ಸಲ್ಲಿಸಿದೆ.   ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳು ರಾಯ್‌ಪುರ ಅಥವಾ ಇಂದೋರ್‌ಗೆ ಶಿಫ್ಟ್‌?

ಆರ್‌ಸಿಬಿಯಿಂದ ಈ ಮಹತ್ವದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಈ ಬಾರಿಯೂ ಬೆಂಗಳೂರಿನಲ್ಲೇ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಆರ್‌ಸಿಬಿ ಹೇಳಿದ್ದೇನು?
ಆಟೊಮೇಷನ್ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ತಂತ್ರಜ್ಞಾನ ಕಂಪನಿಯಾದ ಸ್ಟಾಕ್ ಜೊತೆ ನಾವು ಪಾಲುದಾರಿಕೆ ಹೊಂದಿದ್ದೇವೆ.

ಅತ್ಯಾಧುನಿಕ ಮುಖ ಗುರುತಿಸುವಿಕೆ ತಂತ್ರಜ್ಞಾನ ಇರುವ ಕಾರಣ ಈ ಕಂಪನಿಯ ಕ್ಯಾಮೆರಾಗಳನ್ನು ಅನೇಕ ರಾಜ್ಯದ ಪೊಲೀಸ್ ಪಡೆಗಳು ಬಳಕೆ ಮಾಡುತ್ತಿವೆ. ತನಿಖೆಗಳಲ್ಲೂ ಸಹಾಯ ಮಾಡಿದೆ.

ಗಲಾಟೆ, ಅನಧಿಕೃತ ಪ್ರವೇಶ ಮತ್ತು ಒಳನುಗ್ಗುವಿಕೆಯಂತಹ ಘಟನೆಗಳು ನಡೆದರೆ ಆರಂಭದಲ್ಲೇ ಪತ್ತೆ ಹಚ್ಚುತ್ತದೆ. ಎಲ್ಲಾ ಅಭಿಮಾನಿಗಳಿಗೆ ಸುರಕ್ಷತೆಗೆ ಒತ್ತು ನೀಡಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಆಂಧ್ರಪ್ರದೇಶ ವಿರುದ್ಧ ದೆಹಲಿ ತಂಡಗಳ ನಡುವಿನ ವಿಜಯ್‌ ಹಜಾರೆ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಬೇಕಿತ್ತು. ಕೊನೆಕ್ಷಣದವರೆಗೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಕೊನೆಗೆ ಈ ಪಂದ್ಯಗಳು ಬೆಂಗಳೂರು ವಿಮಾನ ನಿಲ್ದಾಣ ಬಳಿ ಇರುವ ಬಿಸಿಸಿಐ (BCCI) ನಿರ್ಮಾಣ ಮಾಡಿರುವ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ (Centre of Excellence) ಮೈದಾನದಲ್ಲಿ ನಡೆದಿತ್ತು.

ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸುವ ಸಂಬಂಧ ನ್ಯಾ. ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಈಗ ಕೆಎಸ್‌ಸಿಎ ಈಗ ಮುಂದಾಗಿದೆ. ಅಂಬುಲೆನ್ಸ್‌ ಓಡಾಟಕ್ಕೆ ಜಾಗ, ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್‌ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ.

ಈ ಬಾರಿಯ ಐಪಿಎಲ್ ಮಾರ್ಚ್ 21 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಫೆಬ್ರವರಿ ಕೊನೆಯಲ್ಲಿ ಐಪಿಎಲ್‌ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

Share This Article