ನಾನು ವಿದೇಶಿ ಆಟಗಾರನಾ? – ಕಾಲೆಳೆದ ಮಿಸ್ಟರ್‌ ನಾಗ್ಸ್‌ ಬುಡಕ್ಕೆ ಬೆಂಕಿಯಿಟ್ಟ ಕೊಹ್ಲಿ; ವಿಡಿಯೋ ಫುಲ್‌ ವೈರಲ್‌

3 Min Read

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಇನ್‌ಸೈಡರ್ ಶೋನಲ್ಲಿ ಮಗದೊಮ್ಮೆ ಮಿಸ್ಟರ್ ನಾಗ್ಸ್ ಮರ್ಮಭರಿತ ಮಾತುಗಳೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಇಷ್ಟು ದಿನ ಅವರಿವರ ಕಾಲೆಳೆಯುತ್ತಿದ್ದ ಮಿಸ್ಟರ್‌ ನಾಗ್ಸ್‌ (Mr. Nags) ಖ್ಯಾತಿಯ ಡ್ಯಾನಿಶ್‌ ಸೇಠ್‌ (Danish Sait) ಈಗ, ಕಿಂಗ್‌ ಕೊಹ್ಲಿಯನ್ನ ಟ್ರೋಲಿಗೆಳೆದಿದ್ದಾರೆ. ಈ ವಿಡಿಯೋವನ್ನ ಆರ್‌ಸಿಬಿ ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಯಲ್ಲಿ ಲಕ್ಷಾಂತರ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಿಷಯ ಏನಂದ್ರೆ, ಲಂಡನ್ ನಲ್ಲಿ ಮನೆ ಮಾಡಿರುವ ವಿರಾಟ್ ಕೊಹ್ಲಿ (Virat Kohli) ಅವರ ಕುಟುಂಬ ಅಲ್ಲೇ ನೆಲೆಸುತ್ತಿದೆ. ವಿರಾಟ್ ಕೊಹ್ಲಿ ಅವರು ಪ್ರಸ್ತುತ ಕ್ರಿಕೆಟ್ ಪಂದ್ಯಗಳನ್ನು ಆಡುವ ಸಲುವಾಗಿ ಮಾತ್ರ ಭಾರತಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ವಿರಾಟ್‌ ಕೊಹ್ಲಿ ಕೂಡ ಸ್ಪಷ್ಟನೆ ಕೊಟ್ಟಿದ್ದರು. ಈ ವಿಷಯವನ್ನ ನೇರವಾಗಿ ಪ್ರಸ್ತಾಪಿಸದ ನಾಗ್ಸ್‌ ಚೆನ್ನಾಗಿಯೇ ಕೊಹ್ಲಿ ಅವರ ಕಾಲೆಳೆದಿದ್ದಾರೆ.

ನಾಗ್ಸ್‌ ಕೇಳಿದ್ದೇನು? – ಕೊಹ್ಲಿ ಹೇಳಿದ್ದೇನು?
ಸೋಷಿಯಲ್‌ ಮೀಡಿಯಾದಲ್ಲಿ ನಿಮ್ಮ ಕುರಿತು ಅನೇಕ ಸಂಗತಿಗಳು ಚರ್ಚೆಯಾಗುತ್ತಿವೆ.. ʻಈ ಎಪಿಸೋಡ್‌ನಲ್ಲಿ ಆರ್‌ಸಿಬಿ ಐವರು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆʼ ಅನ್ನೋದು ಚರ್ಚೆಯಾಗ್ತಿದೆ, ನನಗೇಕೋ ಇದು ಅರ್ಥವಾಗ್ತಿಲ್ಲ ಅಂತ ಪ್ರಶ್ನೆ ಮಾಡ್ತಾರೆ. ಒಂದು ಕ್ಷಣ ಸ್ಟನ್‌ ಆದ ಕೊಹ್ಲಿ, ಮುಗುಳು ನಕ್ಕು ಉತ್ತರಿಸುತ್ತಾರೆ. ಅರ್ಥ ಆಗ್ತಿಲ್ಲ ಈ ಪ್ರಶ್ನೆ ನನಗೆ ಯಾಕೆ ಕೇಳ್ತಿದ್ದೀರಿ ಅಂತ.. ವಿದೇಶಿ ಆಟಗಾರರನ್ನ ಕೇಳಿ, ನನ್ನನ್ನ ಯಾಕೆ ಕೇಳ್ತಿದ್ದೀರಿ…? ಅಂತ ಪ್ರಶ್ನೆ ಮಾಡ್ತಾರೆ. ಅಷ್ಟರಲ್ಲಿ ನಾಗ್ಸ್‌ ಆಕ್ಚುಲಿ ಏನಂತ ನನಗೂ ಗೊತ್ತಿಲ್ಲ ಬಿಡಿ ಎನ್ನುವಾಗಲೇ ಕೊಹ್ಲಿ, ನಾನಂತೂ ವಿದೇಶಿ ಆಟಗಾರನಲ್ಲ ಅಂತಾರೆ, ನಿಮಗನ್ನಿಸುತ್ತಾ ನಾನು ವಿದೇಶಿ ಆಟಗಾರ ಅಂತ? ಎನ್ನುತ್ತಾ ನಾಗ್ಸ್‌ ಅವರನ್ನೇ ಪ್ರಶ್ನೆ ಮಾಡ್ತಾರೆ. ಆಗ ನಾಗ್ಸ್‌ ಇಲ್ಲ, ಖಂಡಿತಾ ಇಲ್ಲ ಅನ್ನುತ್ತಲೇ ಮುಗುಳು ನಗುತ್ತಾರೆ.

ಅಲ್ಲದೇ ಈ ಸಂದರ್ಶನದಲ್ಲಿ ಕೊಹ್ಲಿಯ ಹೇರ್‌ ಕಟಿಂಗ್‌, ಟ್ಯಾಟೂಗಳ ಬಗ್ಗೆಯೂ ಡೀಪಾಗಿ ಪ್ರಶ್ನೆ ಮಾಡಿ ಕೊಹ್ಲಿಯನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡ್ತಾರೆ‌ ನಾಗ್ಸ್‌, ಒಟ್ನಲ್ಲಿ ಈ ವಿಡಿಯೋ ಅಭಿಮಾನಿಗಳಿಗೆ ಸಖತ್‌ ಕಿಕ್‌ ಕೊಟ್ಟಿದ್ದು, ಕೆಲ ಗಂಟೆಗಳಲ್ಲೇ ವೈರಲ್‌ ಆಗ್ತಿದೆ.

ಕೊಹ್ಲಿ ಕಾಲೆಳೆಯೋಕೆ ಕಾರಣವಾದ್ರೂ ಏನು?
ಲಂಡನ್ ನಲ್ಲಿ ಮನೆ ಮಾಡಿರುವ ವಿರಾಟ್ ಕೊಹ್ಲಿ ಅವರ ಕುಟುಂಬ ಅಲ್ಲೇ ನೆಲೆಸುತ್ತಿದೆ. ವಿರಾಟ್ ಕೊಹ್ಲಿ ಅವರು ಪ್ರಸ್ತುತ ಕ್ರಿಕೆಟ್ ಪಂದ್ಯಗಳನ್ನು ಆಡುವ ಸಲುವಾಗಿ ಮಾತ್ರ ಭಾರತಕ್ಕೆ ಬರುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿರುವ ಅವರು ವರ್ಷದ ಕೆಲ ತಿಂಗಳು ಮಾತ್ರ ಭಾರತ ತಂಡದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಇದ್ದಾಗ ಆರ್‌ಸಿಬಿ ತಂಡದ ಜೊತೆಗಿರುತ್ತಾರೆ. ಕಳೆದ ವರ್ಷ ದಿಲ್ಲಿ ತಂಡದ ಪರ ಕೆಲ ದೇಶಿಯ ಪಂದ್ಯಗಳನ್ನು ಸಹ ಆಡಿದ್ದರು. ಇದೀಗ ಅವರು ಲಂಡನ್ ನ ತಮ್ಮ ಮನೆಯಿಂದಲೇ ಎಲ್ಲೆಡೆ ಪ್ರಯಾಣಿಸುವುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಈ ಬಗ್ಗೆ ಆರ್ ಸಿಬಿ ಫ್ರಾಂಚೈಸಿ ಯಾವ ಸ್ಪಷ್ಟನೆಯನ್ನೂ ನೀಡಿರಲಿಲ್ಲ. ಆದ್ರೆ ವಿರಾಟ್ ಕೊಹ್ಲಿ ಅವರ ಇನ್ ಸ್ಟಾ ಸ್ಟೋರಿಯೇ ಎಲ್ಲಾ ಅನುಮಾನಗಳಿಗೆ ಸ್ಪಷ್ಟನೆ ಕೊಟ್ಟಿತ್ತು. ಇದೇ ವಿಚಾರವಾಗಿ ಸೋಷಿಯಲ್‌ ಮೀಡಿಯಾ ನಡೆದ ಚರ್ಚೆ ಮುಂದಿಟ್ಟುಕೊಂಡು ನಾಗ್ಸ್‌ ಕೊಹ್ಲಿ ಕಾಲೆಳೆದಿದ್ದಾರೆ.

ಆಫ್ ಫೀಲ್ಡ್ ಎಂಟರ್‌ಟೈನರ್‌ ಮಿಸ್ಟರ್‌ ನಾಗ್ಸ್‌
ಆರ್‌ಸಿಬಿ ಆನ್ ಫೀಲ್ಡ್ ಎಂಟರ್‌ಟೈನ್ಮೆಂಟ್ ಇಲ್ಲ ಅಂದ್ರೆ ಆಫ್ ಫೀಲ್ಡ್ ಅಂತೂ ಮಿಸ್‌ ಮಾಡೋದೇ ಇಲ್ಲ. ಪ್ರತಿ ಬಾರಿ ಐಪಿಎಲ್‌ ಶುರುವಾದಾಗೆಲ್ಲ ಹೆಚ್ಚು ಸದ್ದು ಮಾಡುವುದೇ ಮಿಸ್ಟರ್‌ ನಾಗ್ಸ್‌ ಖ್ಯಾತಿಯ ನಿರೂಪಕ ಡ್ಯಾನಿಶ್ ಸೇಠ್ ಅವರ ವಿಡಿಯೋಗಳು. ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ ವಿಷಯಗಳನ್ನ ತಮಾಷೆಭರಿತವಾಗಿ ಅಭಿಮಾನಿಗಳಿಗೆ ತಲುಪಿಸುವ ನಾಗ್ಸ್, ಮರ್ಮಭರಿತ ಟಿಪ್ಸ್‌ಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಲೇ ಇರ್ತಾರೆ.

2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳೇಯದಲ್ಲಿ ಮಿಸ್ಟರ್ ನಾಗ್ಸ್ ಅಭಾವ ಎದ್ದು ಕಾಣಿಸುತ್ತಿತ್ತು. ಅಭಿಮಾನಿಗಳಲ್ಲೂ ಇದು ನಿರಾಸೆಯನ್ನು ಮೂಡಿಸಿತ್ತು. ಆದ್ರೆ ಅಭಿಮಾನಿಗಳ ಕರೆಗೆ ಓಗೊಟ್ಟು ಮತ್ತೆ ರೀ ಎಂಟ್ರಿ ಕೊಟ್ಟರು. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ ಆರ್‌ಸಿಬಿ ಆಟಗಾರರು ಮಿಸ್ಟರ್ ನಾಗ್ಸ್ ಕಾರ್ಯಕ್ರಮವನ್ನ ಅತಿ ಹೆಚ್ಚು ಹಚ್ಚಿಕೊಂಡಿದ್ದಾರೆ.

Share This Article