18 ವರ್ಷಗಳ ವನವಾಸ ಅಂತ್ಯ – ಕೊನೆಗೂ ʻಈ ಸಲ ಕಪ್‌ ನಮ್ದುʼ, ಅಭಿಮಾನಿ ದೇವ್ರುಗಳಿಗೆ ಆರ್‌ಸಿಬಿ ಗಿಫ್ಟ್‌

Public TV
2 Min Read

ಅಹಮದಾಬಾದ್‌: ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

2009, 2011, 2016ರ ಫೈನಲ್‌ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾದ ಆರ್‌ಸಿಬಿ ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಐಪಿಎಲ್‌ (IPL 2025) ಇತಿಹಾಸ ಪುಟ ಸೇರಿದೆ.

191 ರನ್‌ಗಳ ಬೃಹತ್‌ ಟಾರ್ಗೆಟ್‌ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ಶುಭಾರಂಭವನ್ನೇ ಪಡೆದಿತ್ತು. ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿತ್ತು, ಪವರ್‌ ಪ್ಲೇ ಮುಗಿಯುತ್ತಿದ್ದಂತೆ ರನ್‌ ವೇಗ ಕಡಿತಗೊಂಡಿತು. ಈ ನಡುವೆ ಪ್ರಭ್‌ ಸಿಮ್ರನ್‌, ಶ್ರೇಯಸ್‌ ಅಯ್ಯರ್‌ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಆರ್‌ಸಿಬಿ ಗೆಲುವಿಗೆ ಪುಷ್ಠಿ ನೀಡಿತು. ಕೊನೆಯಲ್ಲಿ ಶಶಾಂಕ್‌ ಸಿಂಗ್‌ ಅವರ ಏಕಾಂಗಿ ಹೋರಾಟ ಕೂಡ ವ್ಯರ್ಥವಾಯಿತು.

ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌, ಕೃನಾಲ್‌ ಪಾಂಡ್ಯ ತಲಾ 2 ವಿಕೆಟ್‌, ಯಶ್‌ ದಯಾಳ್‌, ಜೋಶ್‌ ಹೇಜಲ್ವುಡ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 191 ರನ್‌ ಕಲೆಹಾಕಿತ್ತು. ಬೃಹತ್‌ ಮೊತ್ತ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಪವರ್‌ ಪ್ಲೇನಲ್ಲಿ ಫಿಲ್‌ ಸಾಲ್ಟ್‌ ಅವರ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ನಿಧಾನಗತಿಯ ಬ್ಯಾಟಿಂಗ್‌ ಶುರು ಮಾಡಿತು. ಅಲ್ಲದೇ ಒಂದೆಡೆ ರನ್‌ ಕಲೆಹಾಕುತ್ತಿದ್ದ ಆರ್‌ಸಿಬಿ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿತ್ತು. ಕ್ಷಣಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚಾಗುತ್ತಿತ್ತು.

ಮೊದಲ ವಿಕೆಟ್‌ಗೆ ಸಾಲ್ಟ್‌ – ಕೊಹ್ಲಿ ಜೋಡಿ 18 ರನ್‌, 2ನೇ ವಿಕೆಟ್‌ಗೆ ಮಯಾಂಕ್‌ ಅಗರ್ವಾಲ್‌ 38 ರನ್‌, 3ನೇ ವಿಕೆಟಿಗೆ ಕೊಹ್ಲಿ-ರಜತ್‌ ಪಾಟಿದಾರ್‌ ಜೋಡಿ 27 ಎಸೆತಗಳಲ್ಲಿ ಸ್ಫೋಟಕ 40 ರನ್‌, 4ನೇ ವಿಕೆಟಿಗೆ ಕೊಹ್ಲಿ-ಲಿವಿಂಗ್‌ಸ್ಟೋನ್‌ ಜೋಡಿ 35 ರನ್‌ ಜೊತೆಯಾಟ ನೀಡಿತ್ತು. ಆದ್ರೆ 6ನೇ ವಿಕೆಟಿಗೆ ಜಿತೇಶ್‌ ಶರ್ಮಾ ಹಾಗೂ ಲಿವಿಂಗ್‌ಸ್ಟೋನ್‌ ಜೋಡಿ 12 ಎಸೆತಗಳಲ್ಲಿ ಸ್ಫೋಟಕ 36 ರನ್‌ ಜೊತೆಯಾಟ ನೀಡಿತ್ತು. ಇವರಿಬ್ಬರ ಸಿಕ್ಸರ್‌, ಬೌಂಡರಿ ಆಟ ಕೂಡ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆದರೆ ಇವರಿಬ್ಬರ ಆಟಕ್ಕೂ ಪಂಜಾಬ್‌ ಬೌಲರ್‌ಗಳು ಬ್ರೇಕ್‌ ಹಾಕಿದ್ರು.

ಕೈಲ್‌ ಜೆಮಿಸನ್‌ ಬೌಲಿಂಗ್‌ ವೇಳೆ ಲಿವಿಂಗ್‌ಸ್ಟೋನ್‌ ಎಲ್‌ಬಿಡಬ್ಲ್ಯೂಗೆ ಪೆವಿಲಿಯನ್‌ಗೆ ತುತ್ತಾಗಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಕನ್ನಡಿಗ ವಿಜಯ್‌ ಕುಮಾರ್‌ ವೈಶಾಕ್‌ನ ಮಾರಕ ದಾಳಿಗೆ ಜಿತೇಶ್‌ ಶರ್ಮಾ ಕ್ಲೀನ್‌ ಬೌಲ್ಡ್‌ ಆಗಿ ಹೊರ ನಡೆದರು. ಇದು ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಕನಸಿಗೆ ಭಾರೀ ಹೊಡೆತ ನೀಡಿತು. ಕೊನೆಯಲ್ಲಿ ರೊಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ ಗಳಿಸಿತು.

ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌, ಕೈಲ್‌ ಜೆಮಿಸನ್‌ ತಲಾ ಮೂರು ವಿಕೆಟ್‌ ಕಿತ್ತರೆ, ಅಜ್ಮತುತ್ತ ಒಮರ್ಝೈ, ವಿಜಯ್‌ ಕುಮಾರ್‌ ವೈಶಾಕ್‌, ಚಹಲ್‌ ತಲಾ ಒಂದು ವಿಕೆಟ್‌ ಕಿತ್ತರು.

Share This Article