ಆರ್‌ಬಿಐ ರೆಪೋ ದರ ಯಥಾಸ್ಥಿತಿಯಲ್ಲೇ ಮುಂದುವರಿಕೆ

1 Min Read

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರ (Repo Rate) ಯಥಾಸ್ಥಿತಿಯಲ್ಲೇ ಮುಂದುವರಿಸಿದೆ.

ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯು ಸರ್ವಾನುಮತದಿಂದ ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸು ಬಗ್ಗೆ ನಿರ್ಧರಿಸಿದೆ.

ಬೆಳವಣಿಗೆಯಾಗುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಕೋನದ ವಿವರವಾಗಿ ಮೌಲ್ಯಮಾಪನದ ನಂತರ ಎಂಪಿಸಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ ಎಂದು ಮಲ್ಹೋತ್ರಾ ಹೇಳಿದರು.

ದೇಶೀಯ ಹಣದುಬ್ಬರ ಮತ್ತು ಬೆಳವಣಿಗೆಯ ಮುನ್ನೋಟವು ಧನಾತ್ಮಕವಾಗಿದೆ. ಮುಂದಿನ ಎರಡು ತ್ರೈಮಾಸಿಕಗಳಿಗೆ ನೈಜ ಜಿಡಿಪಿ ಬೆಳವಣಿಗೆ ಏರಿಕೆಯಾಗುವಂತೆ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು.

ಡಿಸೆಂಬರ್‌ನಲ್ಲಿ ನಡೆದ ಎಂಸಿಸಿ ಸಭೆಯಲ್ಲಿ ಆರ್‌ಬಿಐ 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದರಿಂದ ರೆಪೋ ಬಡ್ಡಿ ದರ 5.50% ರಿಂದ 5.25% ಕ್ಕೆ ಇಳಿಕೆಯಾಗಿತ್ತು. ಇದನ್ನೂ ಓದಿ: ಟ್ರಂಪ್‌ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿ

 

ರೆಪೋ ದರ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ, ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

Share This Article