ಮುಕ್ತಾಯ ಹಂತದಲ್ಲಿ ರವಿಚಂದ್ರನ್ ನಟನೆಯ ‘ದ ಜಡ್ಜ್‌ಮೆಂಟ್‌’

Public TV
2 Min Read

ಕ್ರೇಜಿಸ್ಟಾರ್ ವಿ ರವಿಚಂದ್ರನ್ (Ravichandran) ಪ್ರಮುಖಪಾತ್ರದಲ್ಲಿ ನಟಿಸಿರುವ  ‘ದ ಜಡ್ಜ್ ಮೆಂಟ್’ (The Judgment) ಚಿತ್ರದ ಚಿತ್ರೀಕರಣ (Shooting) ಮುಕ್ತಾಯ ಹಂತ ತಲುಪಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಚಿತ್ರದ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.

ಮೊದಲಿಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ) (Gururaj Kulkarni) , ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸಂಕಲನ ಕಾರ್ಯ ನಡೆಯುತ್ತಿದೆ. ನಮ್ಮ ಚಿತ್ರದ ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ.  ನಾನು ಹಿಂದೆ ನಿರ್ಮಾಪಕನಾಗಿ ಬಂದಾಗ ಯಾರು ಕೂಡ ನನ್ನನ್ನು ಪರಿಚಯಿಸಿರಲಿಲ್ಲ. ಆಗ ನನಗೆ ತುಂಬಾ ಬೇಸರವಾಗಿತ್ತು. ನಿರ್ಮಾಪಕರಿಗೆ ಸಲುವ ಗೌರವ ಸಲ್ಲಲ್ಲೇ ಬೇಕು. ಹಾಗಾಗಿ ನಾನು ಮೊದಲು ನಿರ್ಮಾಪಕರನ್ನು ಪರಿಚಯಿಸುತ್ತಿದ್ದೇನೆ. ಶರದ್ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡನ್ನು ಬರೆದಿದ್ದಾರೆ. ವಾಸುದೇವ ಚಿತ್ರಕಥೆ, ಎಂ.ಎಸ್ ರಮೇಶ್ ಸಂಭಾಷಣೆ, ಕೆಂಪರಾಜ್ ಸಂಕಲನ ಹಾಗೂ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.

ನಾವು ಗೆಳೆಯರೆಲ್ಲಾ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ಚಿತ್ರ ಈಗಾಗಲೇ ಮುಂಬೈ ತನಕ ತಲುಪಿದೆ. ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಯೋಜನೆಯಿದೆ. ಅಲ್ಲಿನ ಪ್ರಸಿದ್ದ ನಟರೊಬ್ಬರ ಜೊತೆ ಸದ್ಯದಲ್ಲೇ ಈ ಕುರಿತು ಚರ್ಚಿಸಲಿದ್ದೇವೆ.‌  ನಮ್ಮ ಚಿತ್ರ ಅಲ್ಲಿಯವರೆಗೂ ತಲುಪಲು ಇಲ್ಲಿನ ಮಾಧ್ಯಮ ನೀಡಿದ ಬೆಂಬಲ ಕಾರಣ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು.

ಈಗ ಸಾಮಾನ್ಯವಾಗಿ ಮೊಬೈಲ್ ನಲ್ಲೇ ಟ್ಯೂನ್ ಕಳುಹಿಸುತ್ತಾರೆ. ನಾವು ಸಾಹಿತ್ಯ ಬರೆದು ಕಳುಹಿಸುತ್ತೇವೆ. ಆದರೆ ಈ ಚಿತ್ರದಲ್ಲಿ ಅನೂಪ್ ಸೀಳಿನ್ ಅವರ ಉಪಸ್ಥಿತಿಯಲ್ಲೇ ಹಾಡು ಬರೆದಿದ್ದೇನೆ. ನಿರ್ದೇಶಕರಿಗೂ ಇಷ್ಟವಾಗಿದೆ ಎಂದರು ಗೀತರಚನೆಕಾರ ಪ್ರಮೋದ್ ಮರವಂತೆ. ನನ್ನ ಮೂವತ್ತೆರಡು ವರ್ಷಗಳ ಸಿನಿ ಜರ್ನಿಯಲ್ಲಿ ತಂತ್ರಜ್ಞರಿಗಾಗಿ ಪತ್ರಿಕಾಗೋಷ್ಠಿ ಆಯೋಜಿಸಿರುವುದು ಇದೇ ಮೊದಲಿರಬೇಕು. ಈ ಚಿತ್ರದ ಸಂಭಾಷಣೆ ಮಾಮೂಲಿ ತರಹ ಇಲ್ಲ. ಸ್ವಲ್ಪ ಭಿನ್ನವಾಗಿದೆ ಎಂದರು ಸಂಭಾಷಣೆ ಬರೆದಿರುವ ಎಂ ಎಸ್ ರಮೇಶ್.

ಈಗ ಸಾಮಾನ್ಯವಾಗಿ ಕಥೆಯನ್ನು ಯಾರೊಂದಿಗೂ ಜಾಸ್ತಿ ಚರ್ಚೆ ಮಾಡುವುದಿಲ್ಲ. ಆದರೆ ಈ ಚಿತ್ರದ ಕಥೆಯನ್ನು ನಿರ್ದೇಶಕರು ಸತ್ಯಪ್ರಕಾಶ್, ಗೋಪಿ ಪೀಣ್ಯ ಮುಂತಾದವರ ಜೊತೆ ಚರ್ಚಿಸಿದ್ದರು. ಹಾಗೆ ಮಾಡಿದಾಗ ಒಂದೊಳ್ಳೆ ಕಥೆ ಹುಟ್ಟುತ್ತದೆ ಎಂದರು ಸಂಕಲನಕಾರ ಕೆಂಪರಾಜು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಸಹ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಬಗ್ಗೆ ಸಂತಸ ವ್ಯಕ್ತಪಡಿಸಿ, ಚಿತ್ರೀಕರಣದ ಸನುಭವವನ್ನು ಹಂಚಿಕೊಂಡರು. ಕ್ರೇಜಿಸ್ಟಾರ್ ರವಿಚಂದ್ರನ್, ನಾಗಾಭರಣ, ದಿಗಂತ್ , ಧನ್ಯ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This Article