ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

Public TV
2 Min Read

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಸಂಬಂಧ ನಂದಿಬೆಟ್ಟದ ತಪ್ಪಲಿನ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಸೇರಿದಂತೆ ಅಂಗಡಿ ಮಾಲೀಕರ ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಚನ್ನಣ್ಣನವರ್ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಾರಹಳ್ಳಿ ಕ್ರಾಸ್‍ನ ಹೋಟೆಲಿನಲ್ಲಿ ಮಾಲೀಕರ ಜೊತೆ ಸಭೆ ನಡೆಸಿದ ಎಸ್‍ಪಿ ರವಿ ಚನ್ನಣ್ಣನವರ್, ನಂದಿಬೆಟ್ಟದ ತಪ್ಪಲಿನಲ್ಲಿ ಅಕ್ರಮ ಚಟುವಟಿಕೆಗಳು, ಅಕ್ರಮ ಮದ್ಯ ಮಾರಾಟ ನಡೆಯುತ್ತದೆ. ಇಲ್ಲಿ ಹುಕ್ಕಾ ಬಾರ್ ಗಳಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನುವ ಜನಾಭಿಪ್ರಾಯ ಇದೆ. ಈ ಭಾಗದಲ್ಲಿ ವರದಿಯಾದ ಅಪರಾಧ ಪ್ರಕರಣಗಳಿಂದ ನನಗೂ ಕೂಡ ಹಾಗೆ ಅನಿಸಿದೆ. ಹೀಗಾಗಿ ಹೊಸ ವರ್ಷದ ಅಂಗವಾಗಿ ನಂದಿಬೆಟ್ಟದ ತಪ್ಪಲಿನಲ್ಲಿನ ರೆಸಾರ್ಟ್, ರೆಸ್ಟೋರೆಂಟ್, ಹೋಟೆಲ್, ಅಂಗಡಿ ಮಾಲೀಕರು ಕಾನೂನು ರೀತಿ ಹೊಸ ವರ್ಷಾಚರಣೆ ಮಾಡಬೇಕೇ ಹೊರತು ಕಾನೂನು ನಿಯಮಗಳನ್ನ ಮೀರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದರು.

ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಮದ್ಯ ಮಾರಾಟ ಮಾಡಿ, ಪಾರ್ಟಿಗಳನ್ನ ಆಯೋಜನೆ ಮಾಡಿ, ಡಿಜೆಗಳನ್ನ ಹಾಕಿ, ಟೆಂಟ್‍ಗಳನ್ನ ಹಾಕಿ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂದಹಾಗೆ ಮದ್ಯ ಮಾರಾಟಕ್ಕೆ ಅನುಮತಿ ಪಡೆದವರಿಗೆ ಅಷ್ಟೇ ಅವಕಾಶವಿದೆ. ಅದು ರಾತ್ರಿ ಪೂರ್ತಿ ಇರೋದಿಲ್ಲ. ಡಿಜೆಗೆ ಅನುಮತಿಯನ್ನ ನೀಡುವುದಿಲ್ಲ. ಡಿಜೆ ಮಾಡುವುದು ಕಾನೂನುಬಾಹಿರ. ಆದರೆ ಕೌಟುಂಬಿಕ ಸಭ್ಯ ಜನರು ಬಂದು ಊಟ ಮಾಡಿ ಮನರಂಜನೆ ಪಡೆಯಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

ಈಗಾಗಲೇ ಸ್ಥಳೀಯ ಹೆಗ್ಗಡಹಳ್ಳಿ ಹಾಗೂ ಕಾರಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರುಗಳಿಂದ ನಂದಿಬೆಟ್ಟದ ತಪ್ಪಲಿನಲ್ಲಿ ಹಾಗೂ ವಿಶೇಷವಾಗಿ ಹ್ಯಾಂಗ್ ಔಟ್ ಕೆಫೆ, ಗ್ರೌಂಡ್ ಜಿರೋ, ಮಿಸ್ಟ್ ಫ್ಯಾಕ್ಟರಿ, ಹಿಲ್ ಡ್ರೈವ್ ಕೆಫೆಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ದೂರುಗಳ ಕೇಳಿಬಂದಿವೆ. ಹೀಗಾಗಿ ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನ ನಡೆಸಿದರೆ ಕೇಸ್ ದಾಖಲಿಸಲಾಗುವುದು ಎಂದು ರವಿ ಚನ್ನಣ್ಣನವರ್ ಎಚ್ಚರಿಕೆ ನೀಡಿದರು.

ಸಿಎಲ್ 5 ಅನುಮತಿ ಪಡೆದರೆ ನಿಗದಿತ ಸಮಯದವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇರುತ್ತೆ ಆದರೆ ಅದರ ಹೆಸರಲ್ಲಿ ದೊಡ್ಡ ಮಟ್ಟದ ಇವೆಂಟ್‍ಗಳನ್ನ ನಡೆಸುವಂತಿಲ್ಲ, ಜಿಲ್ಲಾಡಳಿತದಿಂದ ಅನುವತಿ ಪಡೆದು ನಡೆಸಿದರೂ ಸಹ ಪಾರ್ಟಿಗೆ ಬಂದು ಹೋದವರ ಸಂಪೂರ್ಣ ಮಾಹಿತಿ, ವಿಳಾಸ ಸಮೇತ ಮೊಬೈಲ್ ನಂಬರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಬೇಕಾಗುತ್ತದೆ. ಅಲ್ಲದೆ ಕಡ್ಡಾಯವಾಗಿ ಸಿಸಿಟಿವಿ ಆಳವಡಿಕೆ ಮಾಡಬೇಕು. ಹೀಗೆ 21 ನಿಯಮಗಳನ್ನ ಒಪ್ಪಿದರೆ ಮಾತ್ರ ನಿಮಗೆ ಪಾರ್ಟಿ ಇವೆಂಟ್ ಆಯೋಜನೆ ಮಾಡಲು ಅನುಮತಿ ಸಿಗುತ್ತದೆ. ಈಗಾಗಲೇ ಕೆಲವರು ಅನುಮತಿ ಕೇಳಿದ್ದು, ಸದ್ಯ ಯಾರಿಗೂ ಅನುಮತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *