ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್

Public TV
2 Min Read

ನವದೆಹಲಿ: ತಾಜ್ ಮಹಲ್ ಜೊತೆಗೆ ರಾಷ್ಟ್ರಪತಿ ಭವನವೂ ಗುಲಾಮಗಿರಿಯ ಸಂಕೇತವಾಗಿದ್ದು, ಇವುಗಳನ್ನು ನೆಲಸಮಗೊಳಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್ ಮಹಲ್ ಗುಲಾಮಗಿರಿಯ ಸಂಕೇತವಾಗಿದ್ದು, ಇದನ್ನು ಕೆಡವಬೇಕೆಂಬ ಹೇಳಿಕೆ ನೀಡಿದ ಮರುದಿನ ಅಜಂ ಖಾನ್ ಈ ಹೇಳಿಕೆ ನೀಡಿದ್ದಾರೆ.

ನಮ್ಮ ಮೇಲೆ ಆಳ್ವಿಕೆ ಮಾಡಿದವರ ಎಲ್ಲಾ ಗುಲಾಮಗಿರಿಯ ಸಂಕೇತಗಳನ್ನು ನಾಶಮಾಡಬೇಕು. ಈ ಮೊದಲೇ ನಾನು ಸಂಸತ್, ಕುತುಬ್ ಮಿನಾರ್, ರಾಷ್ಟ್ರಪತಿ ಭವನ, ಕೆಂಪು ಕೋಟೆ ಮತ್ತು ಆಗ್ರಾದ ತಾಜ್‍ಮಹಲ್ ಇವುಗಳೆಲ್ಲವನ್ನು ಧ್ವಂಸಗೊಳಿಸಬೇಕು ಎಂದು ಅಜಂ ಖಾನ್ ಹೇಳಿದರು.

ಮೊಘಲ್ ಚಕ್ರವರ್ತಿಗಳು, ಬಾಬರ್, ಅಕ್ಬರ್ ಹಾಗೂ ಔರಂಗಜೇಬರನ್ನು ದ್ರೋಹಿಗಳು ಎಂದು ನಾನು ಮುಂಚೆಯೇ ಕರೆದಿದ್ದೆ. ಮೊಘಲ್ ಚಕ್ರವರ್ತಿ ಷಹಜಹಾನ್ ನಂತವರು ಹಿಂದೂಗಳನ್ನು ಅಳಿಸಿ ಹಾಕಲು ಪ್ರಯತ್ನಿಸಿದವರು. ತಾಜ್ ಮಹಲ್ ಅನ್ನು ಕಟ್ಟಿದವರು ಸಹ ದ್ರೋಹಿಗಳು. ಆದ್ದರಿಂದ ಅದಕ್ಕೆ ನಮ್ಮ ಭಾರತದ ಪರಂಪರೆ ಮತ್ತು ಇತಿಹಾಸದಲ್ಲಿ ಸ್ಥಾನವಿಲ್ಲ. ಅದೊಂದು ಕಪ್ಪು ಚುಕ್ಕೆ ಎಂದು ಹೇಳಿದರು.

ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್ ಮಹಲ್ ಹೆಸರನ್ನು ಕೈಬಿಟ್ಟಿದ್ದಕ್ಕೆ ಹಲವರು ಬೇಸರ ಪಟ್ಟಿದ್ದಾರೆ. ತಾಜ್ ಮಹಲ್ ಕಟ್ಟಿಸಿದ ಷಹಜಹಾನ್ ತನ್ನ ಸ್ವಂತ ತಂದೆಯನ್ನೇ ಜೈಲಿಗೆ ಕಳಿಸಿದ್ದ. ಭಾರತದ ಎಲ್ಲಾ ಭಾಗಗಳಲ್ಲೂ ಹಿಂದುಗಳನ್ನು ಅಳಿಸಬೇಕೆಂದು ಬಯಸಿದ್ದ. ಅಂತಹ ವ್ಯಕ್ತಿಗಳು ನಮ್ಮ ಇತಿಹಾಸದ ಭಾಗವಾದರೇ ನಾವು ಇತಿಹಾಸವನ್ನೇ ಬದಲಾಯಿಸುತ್ತೇವೆ ಎಂದು ಸಂಗೀತ್ ಸೋಮ್ ಹೇಳಿದ್ದರು.

ಸೋಮ್ ಅವರ ಹೇಳಿಕೆಗೆ ಈಗ ಎಸ್‍ಪಿ ವಕ್ತಾರರೂ ಸೇರಿದಂತೆ ಹಲವಾರು ವಿರೋಧಿ ರಾಜಕಾರಣಿಗಳು ಅವರನ್ನು ಟೀಕಿಸಿದ್ದು, ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು, ಕೆಂಪುಕೋಟೆಯನ್ನು ಸಹ ದ್ರೋಹಿಗಳೇ ನಿರ್ಮಿಸಿದ್ದು, ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರಾ ಎಂದು ಪ್ರಶ್ನಿಸಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಕಳೆದ ತಿಂಗಳು ಉತ್ತರ ಪ್ರದೇಶ ಪ್ರವಾಸಿ ತಾಣಗಳ ಕಿರು ಪುಸ್ತಕವನ್ನು ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ತಾಜ್ ಮಹಲ್ ಅನ್ನು ಕೈ ಬಿಟ್ಟಿತ್ತು. ಆದರೆ ಯುನೆಸ್ಕೋ ವಿಶ್ವ ಐತಿಹಾಸಿಕ ತಾಣಗಳಲ್ಲಿ ಸ್ಥಾನ ಪಡೆದಿರುವ ತಾಜ್ ಮಹಲ್ ವೀಕ್ಷಿಸಲು ಸುಮಾರು 60 ಲಕ್ಷಕ್ಕಿಂತ ಹೆಚ್ಚಿನ ಪ್ರವಾಸಿಗರು ಪ್ರತಿ ವರ್ಷ ನೋಡಲು ಬರುತ್ತಾರೆ. ಅವರನ್ನು ಬರಬೇಡಿ ಎಂದು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಲ್ಲಿಸುತ್ತಾರಾ ಎಂದು ಓವೈಸಿ ಆಕ್ರೋಶದಿಂದ ಹೇಳಿದ್ದಾರೆ.

ಸೋಮ್ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು, ಇನ್ನು ಮುಂದೆ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಬದಲಾಗಿ ದೆಹಲಿಯ ನೆಹರೂ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರಾ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *