ರಶ್ಮಿಕಾ ನಂತರ ಕತ್ರಿನಾಗೆ ಡೀಪ್ ಫೇಕ್ ಕಾಟ

Public TV
2 Min Read

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್ ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್ ಫೇಕ್ ಕಾಟ ಮುಂದುವರೆದಿದೆ. ಬಾಲಿವುಡ್ (Bollywood) ನಟಿ ಕತ್ರಿನಾ ಕೈಫ್‍  (Katrina Kaif) ಫೋಟೋ ಕೂಡ ಡೀಪ್ ಫೇಕ್ ಮಾಡಲಾಗಿದೆ.

ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್‌ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು

ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ (Social Media) ಹೊಣೆ. ಅಪ್‌ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್‌ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.

ಏನಿದು ಡೀಪ್‌ಫೇಕ್?

ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್‌ ಟೂಲ್‌ ಮೂಲಕ ಜೋಡಿಸುವುದು ಹಳೇಯ ವಿಚಾರ. ಈ ಫೋಟೋಗಳನ್ನು ನೋಡುವಾಗ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಡೀಪ್‌ ಫೇಕ್‌ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ವಿಡಿಯೋ ಎಷ್ಟು ನೈಜತೆ ಇರುತ್ತದೆ ಅಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್+ಮೆಷಿನ್ ಲರ್ನಿಂಗ್ ಸಹಾಯದಿಂದ ಮಾರ್ಫಿಂಗ್ ವಿಡಿಯೋ, ಫೋಟೋಗಳು ಸೃಷ್ಟಿ ಮಾಡುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ಒಬ್ಬ ವ್ಯಕ್ತಿಯಂತೆಯೇ ಸೇಮ್ ಟು ಸೇಮ್ ಡೂಪ್ ಸೃಷ್ಟಿಸಬಹುದು. ಥಟ್ಟನೇ ನೋಡಿದಾಗ ಯಾವುದೇ ವ್ಯತ್ಯಾಸವೇ ಗೊತ್ತಗುವುದಿಲ್ಲ. ಮೃತ ನಟನನ್ನು ಮತ್ತೆ ಸ್ಕ್ರೀನ್‌ ಮೇಲೆ ಮೇಲೆ ಈ ತಂತ್ರಜ್ಞಾನದ ಸಹಾಯದಿಂದ ತೋರಿಸಬಹುದು.

 

ಹಿಂದಿ, ಇಂಗ್ಲೀಷ್ ಮಾತ್ರ ಬರುವ ವ್ಯಕ್ತಿಗೆ ಕನ್ನಡದಲ್ಲಿ ಮಾತನಾಡಿದಂತೆಯೂ ತೋರಿಸಬಹುದು. ಈ ತಂತ್ರಜ್ಞಾನದಿಂದ ಎಷ್ಟು ಲಾಭ ಇದೆಯೋ ಅಷ್ಟೇ ನಷ್ಟವಿದೆ. ದುರ್ಬಳಕೆ ಕೂಡ ಹೆಚ್ಚಾಗುತ್ತಿದೆ. ಈ ಹಿಂದೆ ಡೀಪ್ ಫೇಕ್ ಹಾವಳಿಗೆ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ತುತ್ತಾಗಿದ್ದರು. ಡೀಪ್‌ಫೇಕ್ ಬಳಸಿ ಟಾಮ್ ಹ್ಯಾಂಕ್ಸ್ ಯಾವುದೇ ಜಾಹೀರಾತಿನಲ್ಲಿ ನಟಿಸಿದಂತೆ ಮಾಡಲಾಗಿತ್ತು.

Share This Article