ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹು ನಿರೀಕ್ಷೆಯ ಮೈಸಾ (Mysaa) ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಿತು. ಹೊಸ ಸಿನಿಮಾದ ಪೂಜೆಯಲ್ಲಿ ನಟಿ ರಶ್ಮಿಕಾ ಬುಡಕಟ್ಟು ಮಹಿಳೆಯರೊಂದಿಗೆ ಗೋಂಡ್ ಹಾಡಿಗೆ ಡಾನ್ಸ್ (Dance) ಮಾಡಿ ಸಂಭ್ರಮಿಸಿದರು. ಜೊತೆಗೆ ಗೋಂಡ್ ಸಮುದಾಯದೊಂದಿಗೆ ಕೆಲವು ಸಮಯ ಕಾಲ ಕಳೆದರು
ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ,. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಮೈಸಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಐದು ಭಾಷೆಯಲ್ಲಿ ನಿರ್ಮಾಣವಾಗಲಿದೆ . ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ನಟಿ ರಶ್ಮಿಕಾ ಮಂದಣ್ಣ. ಆ ಸಿನಿಮಾದ ಗೆಲುವು ರಶ್ಮಿಕಾರ ವೃತ್ತಿ ಬದುಕಿಗೆ ಭದ್ರಬುನಾದಿಯನ್ನೇ ಹಾಕಿತು. ಎರಡನೇ ಸಿನಿಮಾದಲ್ಲೇ ಪುನೀತ್ ರಾಜ್‌ಕುಮಾರ್ ಅವರಿಗೆ ನಾಯಕಿಯಾದರು. ಗೋಲ್ಡನ್ ಸ್ಟಾರ್ ಗಣೇಶ್, ದರ್ಶನ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳೇ ರಶ್ಮಿಕಾರನ್ನು ಹುಡುಕಿಕೊಂಡು ಬಂದವು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆಲುವಿನ ಏಣಿ ಏರಿಯೇ ಬಿಟ್ಟರು ರಶ್ಮಿಕಾ ಮಂದಣ್ಣ. ಈ ಹುಡುಗಿಯ ಮೇಲೆ ಪರಭಾಷಾ ನಿರ್ದೇಶಕರ ಕಣ್ಣು ಬಿತ್ತು. ನೋಡ ನೋಡುತ್ತಿದ್ದಂತೆಯೇ ತೆಲುಗಿಗೆ ಹೊರಟು ನಿಂತರು ಕೊಡಗಿನ ಬೆಡಗಿ. ರಶ್ಮಿಕಾರ ಅದೃಷ್ಟವೋ, ಸಿನಿಮಾ ತಂಡದ ಶ್ರಮವೋ ತೆಲುಗಿನಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿದರು. ಇದನ್ನೂ ಓದಿ: ಶೈನ್ ಶೆಟ್ಟಿಯ ಜಸ್ಟ್ ಮ್ಯಾರೀಡ್‌ಗೆ ಡೇಟ್ ಫಿಕ್ಸ್
`ಛಲೋ’ ಸಿನಿಮಾದ ಮೂಲಕ ರಶ್ಮಿಕಾ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರೂ, ಅವರಿಗೆ ದೊಡ್ಡ ಹಿಟ್ ತಂದುಕೊಟ್ಟಿದ್ದು ವಿಜಯ್ ದೇವರಕೊಂಡ ಜೊತೆಗಿನ `ಗೀತ ಗೋವಿಂದಂ’ ಚಿತ್ರ. ಯಾವಾಗ ತೆಲುಗು ಚಿತ್ರಗಳು ಹಿಟ್ ಆಗ್ತಾ ಹೋದವೋ, ಕನ್ನಡದ ಸಿನಿಮಾಗಳನ್ನೇ ಮರೆತುಬಿಟ್ಟರು ರಶ್ಮಿಕಾ ಮಂದಣ್ಣ. ಕಳೆದ ಐದು ವರ್ಷಗಳಿಂದ ಕನ್ನಡದ ಒಂದೇ ಒಂದು ಚಿತ್ರದಲ್ಲಿ ಅವರು ಕಾಣಿಸಿಕೊಂಡಿಲ್ಲ. ಆ ಮಟ್ಟಿಗೆ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಶ್ಮಿಕಾ ನಟನೆಯ ಬಹುತೇಕ ಚಿತ್ರಗಳು ಗೆದ್ದಿವೆ. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿಯನ್ನು ತಂದುಕೊಟ್ಟಿವೆ. ಹಾಗಾಗಿ ರಶ್ಮಿಕಾ ಸಿನಿಮಾದಲ್ಲಿ ಇದ್ದರೆ, ಆ ಸಿನಿಮಾ ಗೆಲುವು ಗ್ಯಾರಂಟಿ ಎಂದೇ ಬಣ್ಣಿಸಲಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಚರ್ಚೆಯೂ ಶುರುವಾಗಿದೆ.
ಸಣ್ಣ ಪುಟ್ಟ ಗೆಲುವನ್ನೇ ಸಂಭ್ರಮಿಸುತ್ತಿದ್ದ ರಶ್ಮಿಕಾಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ. ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಚಿತ್ರವದು. ಪುಷ್ಪ ಸಿನಿಮಾ ರಶ್ಮಿಕಾರ ವೃತ್ತಿಯನ್ನು ಮತ್ತಷ್ಟು ವಿಸ್ತರಿಸಿತು. ಕೇವಲ ಕನ್ನಡ ಮತ್ತು ತೆಲುಗು ಚಿತ್ರೋದ್ಯಮಕ್ಕೆ ಸೀಮಿತವಾಗಿದ್ದ ಈ ನಟಿಗೆ ತಮಿಳು, ಹಿಂದಿ, ಮಲಯಾಳಂ ಚಿತ್ರೋದ್ಯಮದಿಂದಲೂ ಆಫರ್ಗಳು ಬರೋಕೆ ಶುರುವಾದವು. ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್, ಧನುಷ್, ದಳಪತಿ ವಿಜಯ್ ಹೀಗೆ ಸ್ಟಾರ್ ನಟರ ಚಿತ್ರಗಳಲ್ಲೇ ರಶ್ಮಿಕಾ ಕಾಣಿಸಲು ಶುರುವಾದರು. ಸ್ಟಾರ್ ನಟರ ಜೊತೆ ಗೆಲುವನ್ನು ಎಂಜಾಯ್ ಮಾಡಿದ್ದು ರಶ್ಮಿಕಾ ಇದೀಗ ಒಂಟಿ ಹೋರಾಟಕ್ಕೆ ನಿಂತಿದ್ದಾರೆ.