ರಶೀದ್ ಖಾನ್ ಸ್ಪಿನ್ ಮೋಡಿ: ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 45 ರನ್ ಜಯ

Public TV
2 Min Read

ಡೆಹ್ರಾಡೂನ್: ಸ್ಪಿನ್ ಸೆನ್ಸೇಶನ್ ರಶೀದ್ ಖಾನ್ ಅಮೋಘ ಬೌಲಿಂಗ್ ನೆರವಿನಿಂದ ಅಫ್ಘಾನಿಸ್ತಾನ ತಂಡವು, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 45 ರನ್‍ಗಳಿಂದ ಗೆದ್ದು ಬೀಗಿದೆ.

ಡೆಹ್ರಾಡೂನ್‍ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನವನ್ನು ತವರು ಮೈದಾನವನ್ನಾಗಿ ಆಯ್ಕೆ ಮಾಡಿದ್ದ ಬಳಿಕ ತಾನಾಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನ ಅನುಭವಿ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿತು.

25 ಸಾವಿರ ಅಭಿಮಾನಿಗಳಿಂದ ಭರ್ತಿಯಾಗಿದ್ದ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತ್ತು. 168 ರನ್ ಚೇಸಿಂಗ್ ವೇಳೆ ಬಾಂಗ್ಲಾದೇಶ, ರಶೀದ್ ಖಾನ್ ಹಾಗೂ ಶಪೂರ್ ಝದ್ರಾನ್ ಮಾರಕ ದಾಳಿಯನ್ನು ಎದುರಿಸಲಾಗದೇ 19 ಓವರ್ ಗಳಲ್ಲಿ 122 ರನ್ ಪೇರಿಸಲಷ್ಟೇ ಶಕ್ತವಾಯಿತು. ಆ ಮೂಲಕ 45 ರನ್‍ಗಳಿಂದ ಅಸ್ಗರ್ ಬಳಗಕ್ಕೆ ಶರಣಾಯಿತು.

3 ಓವರ್ ಗಳ ಬಿಗು ಬೌಲಿಂಗ್ ದಾಳಿಯಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟ ಖಾನ್, ಮೂರು ಪ್ರಮುಖ ವಿಕೆಟ್‍ಗಳನ್ನು ಕಿತ್ತು, ಬಾಂಗ್ಲಾ ಪಾಲಿಗೆ ವಿಲನ್ ಆದರು. ಆ ಮೂಲಕ ಟಿ20 ಕ್ರಿಕೆಟ್‍ನಲ್ಲಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಬಳಿಕ 50 ವಿಕೆಟ್ ಕಬಳಿಸಿದ ಎರಡನೇ ಅತ್ಯಂತ ಕಿರಿಯ ಬೌಲರ್ ಎಂಬ ಕೀರ್ತಿಗೂ ರಶೀದ್ ಖಾನ್ ಪಾತ್ರರಾದರು.

ತಾನೆಸೆದ ಪ್ರಥಮ ಓವರ್ ನ ಮೊದಲೆರೆಡು ಎಸೆತಗಳಲ್ಲಿ ಖಾನ್, ಅನುಭವಿ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮುಷ್ಫಿಕುರ್ ರಹ್ಮಾನ್ ಹಾಗೂ ಶಬ್ಬೀರ್ ರಹ್ಮಾನ್ ವಿಕೆಟ್ ಪಡೆದು ತಂಡಕ್ಕೆ ಬ್ರೇಕ್ ನೀಡಿದರು. ರಶೀದ್ ಖಾನ್‍ಗೆ ಉತ್ತಮ ಸಾಥ್ ನೀಡಿದ ಶಪೂರ್ ಝದ್ರ್ರಾನ್ 40 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಬಾಂಗ್ಲಾ ಪರ ಲಿಟಾನ್ ದಾಸ್ 30 (20 ಎಸೆತ), ಮುಷ್ಫಿಕರ್ ರಹ್ಮಾನ್ 20 (17), ಮೊಹಮ್ಮದುಲ್ಲ 29 (25), ಶಕೀಬ್ ಅಲ್ ಹಸನ್ 15 (15) ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‍ಮನ್‍ಗಳು 15 ರನ್ ಗೆರೆ ದಾಟಲಿಲ್ಲ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ಪರ, ಮೊಹಮ್ಮದ್ ಶಹಜಾದ್ 40 (37 ಎಸೆತ), ಉಸ್ಮಾನ್ ಘನಿ 26 (24), ಅಸ್ಗರ್ ಸ್ತಾನಿಕ್ ಝೈಯ್ 25 (24), ಸಮೀಉಲ್ಲಾ ಶೆನ್ವಾರಿ 36 (18) ಹಾಗೂ ಶಫೀಖುಲ್ಲಾ 24 (8) ರನ್ ಗಳಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು. ಬಾಂಗ್ಲಾ ಪರ ಅಬ್ದುಲ್ ಹಸನ್ 40 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮದುಲ್ಲ 1 ರನ್ನಿಗೆ 2 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *