ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

Public TV
2 Min Read

ರ‍್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಹಾಗೂ ನಿವೇದಿತಾ ಗೌಡ ಡಿವೋರ್ಸ್ (Chandan- Niveditha Divorce) ಸುದ್ದಿ ಇಂದು (ಶುಕ್ರವಾರ) ಸಂಜೆಯ ವೇಳೆ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮೊದ ಮೊದಲು ಇದು ಸಿನಿಮಾ ಪ್ರಮೋಷನ್ ಎಂದುಕೊಂಡಿದ್ದವರಿಗೆ ದಂಪತಿ ಕೊನೆಗೂ ಶಾಕ್ ಕೊಟ್ಟರು.

ಹೌದು. ಚಂದನ್ ಹಾಗೂ ನಿವೇದಿತಾ (Niveditha Gowda) ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಬೆನ್ನಲ್ಲೇ ಇಂದು ಇಬ್ಬರೂ ಹಾಜರಾಗಿದ್ದು, ಕೋರ್ಟ್ ವಿಚ್ಛೇದವನ್ನು ಕೂಡ ಮಂಜೂರು ಮಾಡಿದೆ. ಬಳಿಕ ಇಬ್ಬರೂ ಕೈ ಕೈ ಹಿಡಿದುಕೊಂಡು ಕೋರ್ಟ್‍ನಿಂದ ಹೊರ ನಡೆದಿದ್ದಾರೆ. ಇಷ್ಟೆಲ್ಲಾ ಆದರೂ ಈ ಸುದ್ದಿ ನಿಜವೋ ಸುಳ್ಳೋ ಎಂಬ ಗೊಂದಲ ಎಲ್ಲರಲ್ಲಿಯೂ ಮೂಡಿತು.

 

ಈ ನಡುವೆ ಸಂಜೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿರುವುದು ನಿಜವಾಗಿದೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಕೈ ಕೈ ಹಿಡಿದು ಹೊರಬಂದ ಚಂದನ್ ಶೆಟ್ಟಿ, ನಿವೇದಿತಾ ಗೌಡ

ಚಂದನ್ ಶೆಟ್ಟಿ ಬರೆದುಕೊಂಡಿದ್ದೇನು..?: ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿ ನಿವೇದಿತಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಡಿವೋರ್ಸ್ ವಿಚಾರ ಅಭಿಮಾನಿಗಳಿಗಂತೂ ಶಾಕ್ ತಂದಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿರುವುದಂತೂ ಸತ್ಯ. ಈ ನಡುವೆ ಡಿವೋರ್ಸ್ ಆದರೂ ಬಲವಾದ ಸ್ನೇಹ ಹಾಗೂ ಗೌರವವನ್ನು ಹೊಂದಿರುವುದಾಗಿ ಇಬ್ಬರೂ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೋರ್ಟ್‌ ನಿಂದ ಇಬ್ಬರೂ ಕೈಕೈ ಹಿಡಿದುಕೊಂಡೇ ತೆರಳಿದ್ದಾರೆ.

Share This Article