ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ (Gurmeet Ram Rahim) 40 ದಿನಗಳ ಪೆರೋಲ್ (Parole) ಸಿಕ್ಕಿದೆ. ಆತ ಇಂದು (ಆ.5) ಬೆಳಿಗ್ಗೆ ಹರಿಯಾಣದ (Haryana) ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಸಿರ್ಸಾ ಡೇರಾ ಆಶ್ರಮಕ್ಕೆ ತೆರಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌ಗೆ ಇದು 2017 ರಿಂದ 14ನೇ ಬಾರಿ ಪೆರೋಲ್ ಮಂಜುರಾಗಿರುವುದು. ಮೂರು ತಿಂಗಳ ಹಿಂದೆ ಸಹ ಆತನಿಗೆ 21 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು. ಏ.9 ರಂದು, ರಾಮ್ ರಹೀಮ್‌ಗೆ 21 ದಿನಗಳ ರಜೆ ನೀಡಲಾಗಿತ್ತು. ಇದಕ್ಕೂ ಮುನ್ನ ಈ ವರ್ಷ ಜನವರಿಯಲ್ಲಿ 20 ದಿನಗಳ ಪೆರೋಲ್ ನೀಡಲಾಗಿತ್ತು.
ಡೇರಾ ಸಚ್ಚಾ ಸೌದಾದಲ್ಲಿ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಆತನಿಗೆ 20 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. 2019 ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹಿಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಈ ಹಿಂದೆ ಪಂಜಾಬ್, ಹರಿಯಾಣ ಮತ್ತು ನೆರೆಯ ರಾಜ್ಯಗಳಲ್ಲಿ ಚುನಾವಣೆಗಳ ಸಮಯದಲ್ಲಿ ಆತನಿಗೆ ಪೆರೋಲ್ ನೀಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಹರಿಯಾಣ ಉಪಚುನಾವಣೆಯ ಸಮಯದಲ್ಲಿ 40 ದಿನಗಳವರೆಗೆ. ಅದಕ್ಕೂ ಮೊದಲು, 2020 ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ಸಮಯದಲ್ಲಿ 40 ದಿನ ಪೆರೋಲ್ ನೀಡಲಾಗಿತ್ತು. ಅಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯೂ ಪೆರೋಲ್ ಮಂಜೂರು ಮಾಡಲಾಗಿತ್ತು.
ಚುನಾವಣೆ ಸಮಯದಲ್ಲಿ ಪೆರೋಲ್ ನೀಡಿದ್ದರೂ ಸಹ, ರಾಮ್ ರಹೀಮ್‌ಗೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಭಾಷಣ ಮಾಡುವುದು ಮತ್ತು ಚುನಾವಣೆ ಇರುವ ರಾಜ್ಯಗಳಲ್ಲಿ ಉಳಿಯುವುದನ್ನು ನಿಷೇಧಿಸಲಾಗಿತ್ತು.