ಕಲಬುರಗಿ: ಶಾಲೆಯಲ್ಲಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಪ್ರಾಂಶುಪಾಲನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಅಫಜಲಪುರ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸೈಫನ್ ವಿರುದ್ಧ ಈ ಅತ್ಯಾಚಾರ ಆರೋಪ ಕೇಳಿಬಂದಿದೆ. ತಮ್ಮದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತನ್ನೊಂದಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟಿದ್ದಲ್ಲದೇ ಆಕೆಯನ್ನ ಕೆಲಸದಿಂದ ತೆಗೆದುಹಾಕಿದ್ದಾನೆ.
ಕಳೆದ 3 ತಿಂಗಳ ಹಿಂದೆ ಶಾಲೆ ಬಿಟ್ಟ ಮೇಲೆ ಕೊಠಡಿಯಲ್ಲಿ ಯಾರು ಇರಲಿಲ್ಲ. ಈ ವೇಳೆ ಮಹಿಳಾ ಸಿಬ್ಬಂದಿ ಮೇಲೆ ಸೈಫನ್ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಮಹಿಳೆ ಆತನಿಂದ ಹೇಗೋ ತಪ್ಪಿಸಿಕೊಂಡು ಬಂದು ವಾರ್ಡನ್ ಜಗನ್ನಾಥ ಬಳಿ ಹೇಳಿದ್ದಾರೆ. ಈ ವೇಳೆ ವಾರ್ಡನ್ ಕೂಡಾ ನೀನು ಇನ್ನು ಟೆಂಪರರಿಯಾಗಿ ಇದ್ದೀಯಾ ಹೀಗಾಗಿ ನಮ್ಮಿಬ್ಬರೊಂದಿಗೂ ಸಹಕರಿಸು ನಿನಗೆ ಕೆಲಸ ಪರ್ಮನೆಂಟ್ ಮಾಡ್ತೀವಿ ಎಂದು ಹೇಳಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ.
ಮಹಿಳೆ ಪ್ರಾಂಶುಪಾಲನ ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ನಿಮ್ಮ ಬಲಿ ಬಲವಾದ ಸಾಕ್ಷಿ ಇಲ್ಲ ಎಂದು ನಿರಾಕರಿಸಿದ್ದಾರೆ. ಆದರೆ ನೊಂದ ಮಹಿಳೆ ಇದೀಗ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.