ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ ಸ್ಟಾರ್ ರಾನು ಮೊಂಡಲ್ ಕಾರ್ಯಕ್ರಮ ನೀಡುವ ಮೂಲಕ ಮಿಂಚಲಿದ್ದಾರೆ. ನಮ್ಮ ಸುಮಧುರ ಕಂಠಸಿರಿಯಿಂದ ಎಲ್ಲರ ಮನ ಗೆಲ್ಲಲಿದ್ದಾರೆ.
ನಾಡಹಬ್ಬಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅ.1 ರಿಂದ ಅ.6ರವರೆಗೆ ಯುವದಸರಾ ನಡೆಯಲಿದ್ದು, ಉದ್ಘಾಟನಾ ದಿನ ಅಂದರೆ ಅ.1ರಂದು ರಾನು ಮೊಂಡಲ್ ಕಾರ್ಯಕ್ರಮ ನೀಡಿ ಎಲ್ಲರನ್ನು ರಂಜಿಸಲಿದ್ದಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ
ಇದೇ ವೇಳೆ ರಾನು ಮೊಂಡಲ್‍ಗೆ ಯುವ ದಸರಾ ಉಪಸಮಿತಿ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾನು ಮೊಂಡಲ್ ಅವರಿಗೆ ಯುವದಸರಾಗೆ ಕಾರ್ಯಕ್ರಮ ನೀಡಲು ಆಮಂತ್ರಿಸಲಾಗಿದೆ. ಇದನ್ನೂ ಓದಿ:ಇಂದಿನಿಂದ ಮೈಸೂರು ದಸರಾ ವೈಭವ – ಎಸ್.ಎಲ್ ಬೈರಪ್ಪರಿಂದ ಉತ್ಸವಕ್ಕೆ ಚಾಲನೆ
ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ, ಹಾಡು ಹಾಡಿ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿತ್ತು. ಆ ಬಳಿಕ ರಾನು ಅವರಿಗೆ ಹಿಮೇಶ್ ರೇಶ್ಮಿಯಾ ಅವರು ತೇರಿ ಮೇರಿ ಕಹಾನಿ ಎಂಬ ಹಾಡನ್ನು ಹಾಡಲು ಅವಕಾಶ ನೀಡಿದರು. ಈ ಮೂಲಕ ರಾನು ಸ್ಟಾರ್ ಆದರು. ಸದ್ಯ ರಾನು ಅವರಿಗೆ ಬಾಲಿವುಡ್ ಹಾಗೂ ಇತರೆ ಸಿನಿಮಾದಲ್ಲಿ ಹಾಡಲು ಅವಕಾಶಗಳು ದೊರೆಯುತ್ತಿದ್ದು, ಸಖತ್ ಮಿಂಚುತ್ತಿದ್ದಾರೆ.