11 ವರ್ಷದ ಬಳಿಕ ರಣಜಿ ಫೈನಲ್‌ಗೆ ಕರ್ನಾಟಕ – ಹುಬ್ಬಳ್ಳಿಯಲ್ಲಿ ಪಂದ್ಯ

2 Min Read

ಲಕ್ನೋ: 11 ವರ್ಷದ ಬಳಿಕ ಕರ್ನಾಟಕ (Karnataka) ರಣಜಿ ಟ್ರೋಫಿ (Ranji Trophy) ಫೈನಲ್‌ ಪ್ರವೇಶಿಸಿದೆ. ಜಮ್ಮು ಕಾಶ್ಮೀರದ (Jammu Kashmir) ವಿರುದ್ಧದ ಫೈನಲ್‌ (Final) ಪಂದ್ಯ ಫೆ.24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿದೆ.

826 ರನ್‌ಗಳ ಬೃಹತ್‌ ಗುರಿಯನ್ನು ಪಡೆದ ಉತ್ತರಾಖಂಡ(Uttarakhand) ದಿನದ ಅಂತ್ಯಕ್ಕೆ 62 ಓವರ್‌ಗಳಲ್ಲಿ6 ವಿಕೆಟ್‌ ನಷ್ಟಕ್ಕೆ 260 ರನ್‌ಗಳಿಸಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಪಡೆದ ಕಾರಣ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಪರವಾಗಿ ರವಿಚಂದ್ರನ್‌ ಸ್ಮರಣ್‌ 127 ರನ್‌(149 ಎಸೆತ, 12 ಬೌಂಡರಿ, 3 ಸಿಕ್ಸ್‌), ಕೆಎಲ್‌ ರಾಹುಲ್‌ ಔಟಾಗದೇ 86 ರನ್‌(103 ಎಸೆತ, 5 ಬೌಂಡರಿ, 5 ಸಿಕ್ಸ್‌) ಹೊಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ 232 ರನ್‌ ಹೊಡೆದ ದೇವದತ್‌ ಪಡಿಕಲ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೆಂಗಾಳದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿರುವ ಜಮ್ಮು ಕಾಶ್ಮೀರ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಇದನ್ನೂ ಓದಿ: ಜಿಂಬಾಬ್ವೆಯಿಂದ ಲಂಕಾದಹನ – ಕೊನೆಯ ಓವರ್‌ನಲ್ಲಿ ರೋಚಕ ಜಯ

ಯಾರು ಎಷ್ಟು ರನ್‌?
ಕರ್ನಾಟಕ ಮೊದಲ ಇನ್ನಿಂಗ್ಸ್‌ 736/10
ಉತ್ತರಾಖಂಡ ಮೊದಲ ಇನ್ನಿಂಗ್ಸ್‌ 233/10
ಕರ್ನಾಟಕ ಎರಡನೇ ಇನ್ನಿಂಗ್ಸ್‌ 323/10
ಉತ್ತರಾಖಂಡ ಎರಡನೇ ಇನ್ನಿಂಗ್ಸ್‌ 260/6

ಹುಬ್ಬಳ್ಳಿಯಲ್ಲಿ ಯಾಕೆ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಯುತ್ತಿರುವುರಿಂದ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಫೈನಲ್‌ ಪಂದ್ಯವನ್ನು ಹುಬ್ಬಳ್ಳಿಯಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

2015 ರಲ್ಲಿ ಚಾಂಪಿಯನ್‌
ಅಭಿನವ್‌ ಮುಕುಂದ್‌ ನೇತೃತ್ವದ ಕರ್ನಾಟಕ ತಂಡ 2014-15 ಸಾಲಿ ರಣಜಿ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ತಮಿಳುನಾಡು ತಂಡವನ್ನು ಇನ್ನಿಂಗ್ಸ್‌ ಮತ್ತು 217 ರನ್‌ಗಳಿಂದ ಜಯಗಳಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ತಮಿಳುನಾಡು ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 134 ರನ್‌ ಮತ್ತು 411 ರನ್‌ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 762 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕೆಎಲ್‌ ರಾಹುಲ್‌ 188 ರನ್‌ ಹೊಡೆದಿದ್ದರೆ ಕರುಣ್‌ ನಾಯರ್‌ 328 ರನ್‌ ಹೊಡೆದಿದ್ದರು. ತ್ರಿಶತಕ ಹೊಡೆದ ಕರುಣ್‌ ನಾಯರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

Share This Article