ಮಲೆನಾಡಿನಲ್ಲಿ ನಾಳೆಯಿಂದ ರಣಜಿ ಕಾಳಗ – ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವೆ ಪಂದ್ಯ

Public TV
1 Min Read

ಶಿವಮೊಗ್ಗ: ಮಂಗಳವಾರದಿಂದ ಮಲೆನಾಡಿನಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡದ ನಡುವೆ ರಣಜಿ ಕಾಳಗ ನಡೆಯಲಿದೆ. ಈಗಾಗಲೇ ಎರಡು ತಂಡಗಳು ನಗರಕ್ಕೆ ಆಗಮಿಸಿದ್ದು, ನಗರದ ಕೆಎಸ್‍ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ನಿರತವಾಗಿವೆ.

ಇದುವರೆಗೆ ಆಡಿರುವ ಆರು ಪಂದ್ಯದಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಕರ್ನಾಟಕ ತಂಡ ಫೆ.4 ರಿಂದ 7ರವರೆಗೆ ನಡೆಯಲಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯವನ್ನು ಗೆದ್ದು ನಾಕೌಟ್ ಹಾದಿಯನ್ನು ಸುಗಮವಾಗಿಸಿಕೊಳ್ಳುವ ಕಾತರದಲ್ಲಿದೆ.

ರಣಜಿ ಸರಣಿಯಲ್ಲಿ ಆಡಿರುವ ಆರು ಪಂದ್ಯದಲ್ಲಿ ಕರ್ನಾಟಕ ತಂಡ ತಲಾ ಮೂರು ಗೆಲುವು ಹಾಗೂ ಡ್ರಾ ಸಾಧಿಸಿದೆ. ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿ, ಎರಡು ಪಂದ್ಯದಲ್ಲಿ ಸೋಲಿನ ರುಚಿ ಅನುಭವಿಸಿರುವ ಮಧ್ಯಪ್ರದೇಶ ತಂಡ ಕರ್ನಾಟಕ ತಂಡಕ್ಕೆ ಎದುರಾಳಿಯಾಗಲಿದ್ದು, ಪಂದ್ಯದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಈಗಾಗಲೇ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ, 17ನೇ ಸ್ಥಾನದಲ್ಲಿರುವ ಮಧ್ಯಪ್ರದೇಶವನ್ನು ಮತ್ತೊಮ್ಮೆ ಸೋಲಿಸಿ ನಾಕೌಟ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಕರುಣ್ ನಾಯರ್ ನಾಯಕತ್ವದಲ್ಲಿ ಸಿದ್ಧವಾಗಿದೆ. ಇತ್ತ ಈ ಸರಣಿಯಲ್ಲಿ ಒಂದೂ ಗೆಲುವು ಕಾಣದೇ ಕಂಗೆಟ್ಟಿರುವ ಮಧ್ಯಪ್ರದೇಶ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕಾದ ಗುರಿ ಹೊಂದಿದೆ. ನಾಳೆಯ ಪಂದ್ಯ ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಪ್ರೇಮಿಗಳು.

ಕರ್ನಾಟಕ ತಂಡದಲ್ಲಿ ಕರುಣ್ ನಾಯರ್ (ನಾಯಕ), ದೇವದತ್ತ್ ಪಡಿಕ್ಕಲ್, ಆರ್. ಸಮರ್ಥ್, ರೋಹನ್ ಕದಂ, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಸಮರ್ಥ್ ಶ್ರೀನಿವಾಸ್, ಬಿ.ಆರ್ ಶರತ್, ಮಿಥುನ್, ಕೌಶಿಕ್, ರೋಹಿತ್ ಮೊರೆ, ಪ್ರತೀಕ್ ಜೈನ್, ಕೆ.ವಿ ಸಿದ್ದಾರ್ಥ್, ಪ್ರವೀಣ್ ದುಬೆ ಹಾಗೂ ಕೆ. ಗೌತಮ್ ಆಟಗಾರರು ಇದ್ದಾರೆ.

ಮಧ್ಯಪ್ರದೇಶ ತಂಡದಲ್ಲಿ ಶುಭಂ ಶರ್ಮ (ನಾಯಕ), ಯಶ್ ದುಬೆ, ಅಮೀಜ್ ಖಾನ್, ಗೌತಮ್ ರಘುವಂಶಿ, ಅಜೆಯ್ ರೊಹೆರಾ, ಆನಂದ್ ಸಿಂಗ್ ಬೈಸ್, ರಜತ್ ಪಡಿದರ್, ಆದಿತ್ಯ ಶ್ರೀವತ್ಸ, ಕುಮಾರ್ ಕಾರ್ತಿಕೇಯ ಸಿಂಗ್, ಮಿಹಿರ್ ಹಿರ್ವಾನಿ, ಗೌರವ್ ಯಾದವ್, ರವಿ ಯಾದವ್, ವೆಂಕಟೇಶ ಅಯ್ಯರ್, ಕುಲದೀಪ್ ಸೇನ್ ಹಾಗೂ ಹಿಮಾಂಶು ಮಂತ್ರಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *