ಗೆಳೆಯನ ಸಾವಿನಿಂದ ಮನನೊಂದು ಅಪಘಾತ ಜಾಗೃತಿ ಮೂಡಿಸಲು ಟೊಂಕ ಕಟ್ಟಿದ್ರು

Public TV
1 Min Read

ಚಿತ್ರದುರ್ಗ: ಸಾಮಾನ್ಯವಾಗಿ ರಸ್ತೆಗಳಲ್ಲಿ ಭೀಕರ ಅಪಘಾತಗಳಾದಾಗ ಜೀವಕ್ಕೆ ಬೆಲೆ ಇರಲ್ಲ. ಗಾಯಗೊಂಡವರ ಜೀವ ಉಳಿಸುವುದ್ದಕ್ಕಿಂತ ಹೆಚ್ಚಾಗಿ ಮೊಬೈಲ್ ಹಿಡಿದು ವಿಡಿಯೋ ಮಾಡುವವರೇ ಹೆಚ್ಚಿದ್ದಾರೆ. ಆದರೆ ಚಿತ್ರದುರ್ಗದಲ್ಲಿ ಬಿಎಡ್ ವಿದ್ಯಾರ್ಥಿ ಮಾತ್ರ, ಅಪಘಾತವಾಗುವ ಸ್ಥಳಗಳಲ್ಲಿ ನಾಮಫಲಕ ಅಳವಡಿಸಿ ಅಪಘಾತಕ್ಕೆ ಬ್ರೇಕ್ ಹಾಕುವ ಜಾಗೃತಿ ಮೂಡಿಸುತ್ತಿದ್ದಾರೆ.

ರಂಗಸ್ವಾಮಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಗೂ ಅಪಘಾತ ವಲಯಗಳಲ್ಲಿ ಜಾಗೃತಿ ಫಲಕಗಳನ್ನು ಬರೆಯುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಇಂಗಳದಾಳು ಗ್ರಾಮದ ಈ ಯುವಕ, ತನ್ನ ಸ್ನೇಹಿತನ ಸಾವಿನಿಂದಾಗಿ ಮನನೊಂದು, ಮುಂದೆ ಯಾರಿಗೂ ಈ ರೀತಿ ಆಗಬಾರದು ಎಂದು ನಿರ್ಧರಿಸಿ ಅಪಘಾತ ತಡೆ ಜಾಗೃತಿ ಮೂಡಿಸುತ್ತಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಬಿಇಡಿ ವಿದ್ಯಾರ್ಥಿಯಾಗಿರುವ ರಂಗಸ್ವಾಮಿ ಅಪಘಾತ ತಡೆಗಾಗಿಯೇ ಪುಸ್ತಕ ರಚಿಸಿದ್ದಾರೆ. ಮಿಸ್ಟರ್ ಸಂಜೀವಿನಿ ಹೆಸರಿನಲ್ಲಿ 60ಕ್ಕೂ ಹೆಚ್ಚು ಯುವ ಬಳಗ ಕಟ್ಟಿಕೊಂಡಿದ್ದಾರೆ. ಆ ಯುವಕರೆಲ್ಲರೂ ಒಗ್ಗೂಡಿ ಚಿತ್ರದುರ್ಗದ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಅಪಘಾತ ತಡೆ ಕುರಿತು ಮಾಹಿತಿ ನೀಡುತ್ತಾರೆ.

ಮುಖ್ಯ ರಸ್ತೆಗಳಲ್ಲಿ ಹಂಪ್‍ಗೆ ಬಿಳಿ ಬಣ್ಣ ಬಳಿಯುವ ಮೂಲಕ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಎಚ್ಚರಿಸುತ್ತಾರೆ. ಜೊತೆಗೆ ಇಳಿಜಾರು ಹಾಗೂ ರಸ್ತೆ ತಿರುವುಗಳಿರುವ ಡೇಂಜರ್ ಜೋನ್ ಬಳಿ ನಾಮಫಲಕ ಹಾಕಿ, ಇಲ್ಲಿ ನುಸುಳಬೇಡಿ ಇದು ಯಮಲೋಕಕ್ಕೆ ದಾರಿ ಎಂದು ಜನರನ್ನು ಎಚ್ಚರಿಸುವತ್ತಿರುವ ರಂಗಸ್ವಾಮಿ ಅಂಡ್ ಟೀಂ, ದುರ್ಗದ ಜನರ ಪಾಲಿನ ಜೀವರಕ್ಷಕರೆನಿಸಿದ್ದಾರೆ.

ಅಪಘಾತಗಳಿಗೆ ಬ್ರೇಕ್ ಹಾಕುವ ಜಾಗೃತಿ ಕಾರ್ಯವನ್ನು ರಂಗಸ್ವಾಮಿ ಕಳೆದ 5 ವರ್ಷಗಳಿಂದಲೂ ಮೈಗೂಡಿಸಿದ್ದಾರೆ. ರಂಗಸ್ವಾಮಿ ರಜೆ ದಿನಗಳಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೂ ಅಪಘಾತಕ್ಕೆ ಬ್ರೇಕ್ ಹಾಕುವಂತೆ ಜಾಗೃತಿ ಮೂಡಿಸ್ತಾರೆ.

ಅಲ್ಲದೆ ಅಪಘಾತ ತಡೆಯುವ ಜಾಗೃತಿ ಕಾರ್ಯ ಹಾಗು ನಾಮಫಲಕಗಳ ಸಿದ್ಧತೆಗಾಗಿಯೇ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣ ಖರ್ಚಾಗುತ್ತಿದ್ದು, ಅದನ್ನು ಚಿತ್ರಕಲೆ ಮೂಲಕ ಬರುವ ತಮ್ಮ ಸ್ವಂತ ಆದಾಯದಿಂದಲೇ ನಿಸ್ವಾರ್ಥದಿಂದ ಖರ್ಚು ಮಾಡ್ತಿದ್ದಾರೆ. ಹೀಗಾಗಿ ಇವರ ಸೇವಾಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *