ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿ ಅಭ್ಯರ್ಥಿ ಲೀಲಾ ರಾಮ್ ವಿರುದ್ಧ 530 ಮತಗಳ ಅಂತರದಿಂದ ಸೋತಿದ್ದಾರೆ.
ಹರ್ಯಾಣದ ಕೈತಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸುರ್ಜೇವಾಲಾ ಅವರಿಗೆ ಭಾರೀ ಪೈಪೋಟಿ ನೀಡುವಲ್ಲಿ ಲೀಲಾರಾಮ್ ಯಶಸ್ವಿಯಾಗಿದ್ದಾರೆ. 2009 ಹಾಗೂ 2014ರ ಚುನಾವಣೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 2,440 ಮತಗಳಿಂದ ಜಯಗಳಿಸಿದ್ದರು. ಆದರೆ ಈ ಬಾರೀ ಅಲ್ಪ ಮತಗಳಲ್ಲಿ ಸೋಲುಂಡಿದ್ದಾರೆ.
ಚುನಾವಣೆ ಬಳಿಕ ಮಾತನಾಡಿರುವ ಸುರ್ಜೇವಾಲಾ ಅವರು, ಜನರ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಪಕ್ಷ ಮುಂದಿನ ಹಂತದಲ್ಲಿ ಚುನಾವಣೆಯ ಫಲಿತಾಂಶದ ಬಗ್ಗೆ ವಿಶ್ಲೇಷಣೆ ನಡೆಸಲಿದೆ ಎಂದರು ಹೇಳಿದರು. ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರಾಗಿ ಸುರ್ಜೇವಾಲಾ ಅವರು ಕಾರ್ಯನಿರ್ವಹಿಸುತ್ತಾರೆ. ಕೈತಾಲ್ ವಿಧಾನಸಭಾ ಕ್ಷೇತ್ರವೂ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಭಾಗವಾಗಿದೆ.