ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ- ಇದು 85 ಪರ್ಸೆಂಟ್ ಫಿಕ್ಸಿಂಗ್ ಸಭೆನಾ ಅಂತಾ ಬಿಜೆಪಿ ಪ್ರಶ್ನೆ

Public TV
1 Min Read

ಬೆಂಗಳೂರು: ನಗರದ ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವರಾದ ಕೆಜೆ ಜಾರ್ಜ್ (K J George), ಜಮೀರ್ ಅಹ್ಮದ್ ಖಾನ್ (Zameer Ahmed Khan) ಸಭೆ ನಡೆಸಿದ್ರು. ಆದರೆ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಂಡಿರೋದು ನಾನಾ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯಂತೂ ಈ ಸಭೆಯ ಫೋಟೋ ಮುಂದಿಟ್ಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಎಟಿಎಂ ಸರ್ಕಾರದ ನಡೆಸಿರುವ ಈ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರದೊಟ್ಟಿಗಿರಲಿ. ಬಿಬಿಎಂಪಿ ಜೊತೆಯಾಗಲಿ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಸಂಬಂಧ ಹೊಂದಿಲ್ಲದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಈ ಸಭೆಯಲ್ಲಿ ಏನು ಕೆಲಸ..? ಇದು 85 ಪರ್ಸೆಂಟ್ ಡೀಲ್ ಫಿಕ್ಸಿಂಗ್ ಸಭೆಯೇ? ಸಿಎಂ, ಡಿಸಿಎಂ ಉತ್ತರಿಸಬೇಕು ಎಂದು ಬಿಜೆಪಿ ಸವಾಲ್ ಹಾಕಿದೆ. ಇದನ್ನೂ ಓದಿ: ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ?, ಕೈಗೊಂಬೆ ಸರ್ಕಾರಕ್ಕಾ?: ಹೆಚ್‍ಡಿಕೆ

ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರವೋ? 10 ಜನಪತ್ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಎಂದು ಗರಂ ಆಗಿದ್ದಾರೆ. ಸರ್ಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡ್ ನಿಲಯ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು, ಸುರ್ಜೇವಾಲಗೆ ಅಧಿಕಾರ ಕೊಟ್ಟವರು ಯಾರು? ಎಂದು ಆಕ್ರೋಶ ಹೊರಹಾಕಿದ್ದಾರೆ. ಸಭೆಯಲ್ಲಿ ಸುರ್ಜೇವಾಲ ಸೆಂಟರ್ ಸೀಟ್‍ನಲ್ಲಿದ್ದಾರೆ. ಸಚಿವರು ಸೈಡ್ ಕುರ್ಚಿಗಳ ಪಾಲಾಗಿದ್ದಾರೆ. ಇದೇನು ವಿಚಿತ್ರ.? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಿ ಎಂದು ಟ್ವೀಟಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಸುರ್ಜೇವಾಲ ಭೇಟಿಗೆ ಹೋಗಿದ್ದೆ. ನನ್ನನ್ನು ಬಿಡಿಎಗೆ ಕರೆದೊಯ್ಯಲು ಅಧಿಕಾರಿಗಳು ಬಂದಿದ್ರು ಅಷ್ಟೇ. ಯಾವ ಸಭೆಯೂ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ರು.

Share This Article