ಗ್ರಾಮೀಣ ಸೊಗಡಿನ ರಣಹೇಡಿ!

Public TV
1 Min Read

ಬೆಂಗಳೂರು: ಪಕ್ಕಾ ಕಮರ್ಶಿಯಲ್ ಜಾಡಿನ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಗ್ರಾಮೀಣ ಸೊಗಡಿನ ಸಿನಿಮಾಗಳೂ ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದರಲ್ಲಿಯೂ ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ ಆ ಭಾಗದ ಜನಜೀವನವನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಅಪರೂಪಕ್ಕಾದರೂ ನಿರ್ಮಾಣಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ತಯಾರಾಗಿ ಈಗ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ‘ರಣಹೇಡಿ’. ಒಂದಷ್ಟು ಕಾಲದಿಂದ ನಾನಾ ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ, ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿದೆ.

ಮನು ಕೆ ಶೆಟ್ಟಿಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಇಲ್ಲಿ ಈ ಹಿಂದೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿರೋ ಕರ್ಣ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಹಿಸ್ಟರಿ, ಬಡ್ಡಿಮಗನ್ ಲೈಫು ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಐಶ್ವರ್ಯಾ ರಾವ್ ಇಲ್ಲಿ ಕೂಲಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಈ ಚಿತ್ರ ಮೂಡಿ ಬಂದಿದೆ.

ಹೊಸತನದ ಕಥೆಗಳಿಗೇ ಪ್ರಧಾನವಾಗಿ ಪ್ರಾಶಸ್ತ್ಯ ಕೊಡುವ ಸುರೇಶ್ ಅವರು ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ನಂತರದಲ್ಲಿ ಗ್ರಾಮ್ಯ ಕಥನಕ್ಕೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕೇವಲ ಗ್ರಾಮೀಣ ಸೊಗಡಿನ ಕಥೆ ಮಾತ್ರವಲ್ಲ. ಇಲ್ಲಿ ರೈತರ ಸಮಸ್ಯೆಗಳತ್ತ ಬೆಳಕು ಹರಿಸಲಾಗಿದೆ. ನಿಜವಾಗಿಯೂ ಬೆಳೆಯನ್ನೇ ನಂಬಿ ಬದುಕೋ ರೈತ ಯಾವ್ಯಾವ ಸಮಸ್ಯೆಗಳನ್ನು ಎದುರಿಸಿ ನಲುಗುತ್ತಾನೆಂಬುದರ ಚಿತ್ರಣವೂ ಇಲ್ಲಿದೆಯಂತೆ. ಇದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿ ಹೇಳುತ್ತಲೇ ಮಜವಾದ ಹೂರಣವನ್ನು ಬಿಚ್ಚಿಡಲಿರೋ ಈ ಸಿನಿಮಾ ಇನ್ನು ವಾರದೊಪ್ಪತ್ತಿನಲ್ಲಿಯೇ ಚಿತ್ರಮಂದಿರ ತಲುಪಿಕೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *