ಎಲೆಕ್ಷನ್ ಸಮೀಕ್ಷೆಗೆ ರಾಹುಲ್ ಗಾಂಧಿಯಿಂದ 24 ಕೋಟಿ ವಸೂಲಿ?

Public TV
2 Min Read

– ರಮ್ಯಾ ಕೂಡ 8 ಕೋಟಿ ಪಡೆದುಕೊಂಡ್ರಾ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮೀಕ್ಷೆ ಮಾಡುವ ನೆಪದಲ್ಲಿ ರಾಹುಲ್ ಗಾಂಧಿ ಅವರಿಂದ ಸುಮಾರು 24 ಕೋಟಿ ರೂ. ಹಣ ಪಡೆಯಲಾಗಿದೆ ಎಂದು ದಿ ಸಂಡೇ ಗಾರ್ಡಿಯನ್ ವರದಿ ಪ್ರಕಟಿಸಿದೆ.

ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ವಹಿಸಿದ್ದ ಪ್ರವೀಣ್ ಚಕ್ರವರ್ತಿ ಅವರಿಗೆ 24 ಕೋಟಿ ರೂ. ಸಂದಾಯ ಆಗಿದೆ ಎಂದು ವಿವರಿಸಲಾಗಿದೆ. ಈ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ವಹಿಸಿಕೊಂಡಿದ್ದ ರಮ್ಯಾ ಅವರಿಗೆ 8 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಅವರು ಯಾವುದೇ ರೀತಿಯ ಲೆಕ್ಕ ಕೊಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ರಮ್ಯಾ ಅವರು ಇದೇ ಕಾರಣಕ್ಕೆ ಟ್ವಿಟ್ಟರ್ ತೊರೆದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಹಣದ ಬಗ್ಗೆ ಸರಿಯಾದ ಲೆಕ್ಕ ನೀಡದ ಕಾರಣದಿಂದಲೇ ಎಐಸಿಸಿ ಅವರನ್ನು ಸಾಮಾಜಿಕ ಜಾಲತಾಣದಿಂದ ದೂರ ಇಟ್ಟಿದೆಯಾ ಎಂಬ ಪ್ರಶ್ನೆಯೂ ದೆಹಲಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ಅವರಿಗೆ ಆತ್ಮೀಯವಾಗಿದ್ದ ತಂಡವೇ ಫಲಿತಾಂಶದ ವಿಚಾರದಲ್ಲಿ ಅವರಿಗೆ ತಪ್ಪು ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 164 ರಿಂದ 184 ಸ್ಥಾನ ಗಳಿಸಲಿದೆ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆಗಳಲ್ಲಿ ತಿಳಿಸಲಾಗಿತ್ತು ಎಂಬ ಮಾಹಿತಿ ಲಭಿಸಿದೆ.

ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ರಾಹುಲ್ ಆಪ್ತರು, ಅಖಿಲೇಶ್ ಯಾದವ್, ಎಂಕೆ ಸ್ಟ್ಯಾಲಿನ್, ಓಮರ್ ಅಬ್ದುಲ್ಲ ಸೇರಿದಂತೆ ಹಲವು ನಾಯಕರೊಂದಿಗೆ ಯುಪಿಎ ಮೈತ್ರಿ ರಚಿಸಲು ಸಿದ್ಧತೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಸಮೀಕ್ಷೆಗಳು ನೀಡುವ ಮಾಹಿತಿಯಂತೆ ಕಾಂಗ್ರೆಸ್ 164ಕ್ಕೂ ಹೆಚ್ಚು ಸ್ಥಾನ ಪಡೆದು ಮೈತ್ರಿ ಮೂಲಕ ಅಧಿಕಾರ ರಚಿಸಲು ಸಿದ್ಧತೆ ನಡೆಸಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ಚುನಾವಣೆಯಲ್ಲಿ ಗೆಲುವು ಪಡೆದರೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸುವ ಪ್ಲಾನ್ ಕೂಡ ಮಾಡಿದ್ದರು.

ಚುನಾವಣೆಯ ಫಲಿತಾಂಶದ ಬಳಿಕ ಪ್ರವೀಣ್ ಚಕ್ರವರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ಆ್ಯಪ್ ಸೇರಿದಂತೆ ವಿವಿಧ ಉಸ್ತುವಾರಿಗಳಿಂದ ದೂರವಾಗಿದ್ದಾರೆ. ಅಲ್ಲದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಕೂಡ ಸಲ್ಲಿಕೆ ಮಾಡಿಲ್ಲ. ಇದಕ್ಕಾಗಿ ಸುಮಾರು 24 ಕೋಟಿ ರೂ. ವೆಚ್ಚ ಮಾಡಿದ್ದರು. ಇದರೊಂದಿಗೆ ರಮ್ಯಾ ಅವರು ಕೂಡ 8 ರೂ. ಪಡೆದಿದ್ದರು ಎನ್ನಲಾಗಿದೆ.

ರಾಹುಲ್ ಆಪ್ತರಾಗಿದ್ದ ಈ ತಂಡ ರಾಹುಲ್ ಅವರಿಗೆ ಮಾತ್ರವಲ್ಲದೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೂ ಇಂತಹದ್ದೇ ತಪ್ಪು ಮಾಹಿತಿ ನೀಡಿತ್ತು ಎಂದು ವರದಿ ತಿಳಿಸಿದೆ. ಚುನಾವಣೆ ಬಳಿಕ ಪಕ್ಷದ ನಾಯಕತ್ವವನ್ನು ಬೇರೆಯವರಿಗೆ ವಹಿಸಲು ರಾಹುಲ್ ಗಾಂಧಿ ರಾಜೀನಾಮೆ ಮುಂದಿಟ್ಟಿದ್ದರು. ಆದರೆ ಪಕ್ಷದ ಹಿರಿಯ ನಾಯಕರು ರಾಹುಲ್ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಯ ಸಿದ್ಧತೆ, ಪಕ್ಷದ ಮರು ಸಂಘಟನೆಗೆ ಒತ್ತಾಯ ಮಾಡಿದ್ದರು. ಚುನಾವಣೆ ಸಮಯದಲ್ಲಿ ತಮ್ಮ ಆಪ್ತರ ವರದಿಗಳನ್ನು ಹೆಚ್ಚು ನಂಬಿರುವುದೇ ಚುನಾವಣೆಯ ನೈಜತೆ ತಿಳಿಯಲು ರಾಹುಲ್ ಗಾಂಧಿ ಅವರಿಗೆ ಮುಳುವಾಯಿತಾ ಎಂಬ ಚರ್ಚೆ ಸದ್ಯ ಪಕ್ಷದ ವಲಯದಲ್ಲಿ ಜೋರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *