ರಾಮಾಪುರ ಪೊಲೀಸ್ ಠಾಣೆಯನ್ನ ಸ್ಮಾರಕವನ್ನಾಗಿ ಮಾಡಿ: ಡಿಜಿ-ಐಜಿಗೆ ಸುರೇಶ್ ಕುಮಾರ್ ಪತ್ರ

Public TV
2 Min Read

ಬೆಂಗಳೂರು: ಕಾಡುಗಳ್ಳ, ನರಹಂತಕ ವೀರಪ್ಪನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನೂರಾರು ಪೊಲೀಸರನ್ನ ಕೊಂದು ವಿಕೃತಿ ಮನುಷ್ಯ. ಪದ್ಮಭೂಷಣ ಡಾ. ರಾಜಕುಮಾರ್ ಅವರನ್ನ ಅಪಹರಣ ಮಾಡಿದ್ದ ಕಿರಾತಕ. ನೂರಾರು ಜನರ ಮಾರಣ ಹೋಮಕ್ಕೆ ಕಾರಣವಾಗಿದ್ದ ಮನುಷ್ಯ ರೂಪದ ರಾಕ್ಷಸ. ಈತನ ಕ್ರೌರ್ಯಕ್ಕೆ ಅದೇಷ್ಟೋ ಪೊಲೀಸರು ಪ್ರಾಣ ತೆತ್ತಿದ್ದಾರೆ. ಹೀಗೆ ವೀರಪ್ಪನ್ ಕ್ರೌರ್ಯಕ್ಕೆ ಪ್ರಾಣ ಕಳೆದುಕೊಂಡ ಚಾಮರಾಜನಗರ ಜಿಲ್ಲೆಯ ರಾಮಾಪುರ ಠಾಣೆಯ ಪೊಲೀಸರ ಸವಿ ನೆನಪಿಗೆ ಠಾಣೆಯನ್ನ ಸ್ಮಾರಕವನ್ನಾಗಿಸುವಂತೆ ಮನವಿಗಳು ಕೇಳಿ ಬಂದಿವೆ. ಸ್ವತಃ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಪೊಲೀಸ್ ಮಹಾ ನಿರ್ದೇಕರಾದ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಸ್ಮಾರಕವನ್ನಾಗಿಸುವಂತೆ ಮನವಿ ಮಾಡಿದ್ದಾರೆ.

ಫೆಬ್ರವರಿ 11 ರಂದು ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರಾಮಾಪುರದ ಹಳೆಯ ಪೊಲೀಸ್ ಠಾಣೆಗೂ ಭೇಟಿ ಕೊಟ್ಟಿದ್ದರು. ಶಿಥಿಲಗೊಂಡಿದ್ದ ಕಟ್ಟಡ ನೋಡಿ ಸಚಿವರು ಮನನೊಂದರು. ಹೀಗಾಗಿ ಅ ಶಿಥಿಲಗೊಂಡ ಪೊಲೀಸ್ ಠಾಣೆಯನ್ನ ಅಭಿವೃದ್ಧಿ ಮಾಡಿ ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾದ ಐದು ಜನ ಪೊಲೀಸರ ಸ್ಮಾರಕ ನಿರ್ಮಿಸಿದರೆ ಮುಂದಿನ ಪೀಳಿಗೆಗೆ ಒಂದು ಸಂದೇಶ ಸಿಕ್ಕಂತೆ ಆಗುತ್ತೆ. ಹೀಗಾಗಿ ಐದು ಜನ ಪೊಲೀಸರ ಸ್ಮಾರಕ ನಿರ್ಮಿಸುವಂತೆ ಡಿಜಿ-ಐಜಿ ಅವ್ರಿಗೆ ಮನವಿ ಪತ್ರ ಬರೆದಿದ್ದಾರೆ.

1992ರ ಮೇ 21 ರ ಮಧ್ಯರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಾದ ಇಳಂಗೋವನ್, ಗೋವಿಂದ ರಾಜು, ಸಿದ್ದರಾಜು, ರಾಚಪ್ಪ, ಪ್ರೇಮ ಕುಮಾರ್ ಅವರುಗಳ ಮೇಲೆ ವೀರಪ್ಪನ್ ಮತ್ತು ಆತನ ಸಹಚರರು ಗುಂಡಿನ ದಾಳಿ ನಡೆಸಿದ್ರು. 5 ಜನ ಪೊಲೀಸರು ಅಂದು ಮೃತರಾಗಿದ್ದರು.

ಈಗಾಗಲೇ ಅರಣ್ಯಾಧಿಕಾರಿ ಮೃತರಾದ ಶ್ರೀನಿವಾಸನ್ ಅವ್ರ ನೆನಪಿಗೆ ಗೋಪಿನಾಥಂನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅ ಸ್ಮಾರಕದಿಂದ ಅವರ ನೆನಪು ಇಂದಿಗೂ ಒಂದು ಭಾವನಾತ್ಮಕವಾದ ಸಾಮಾಜಿಕ ಮನಸ್ಥಿತಿಯನ್ನ ಜೀವಂತವಾಗಿಟ್ಟಿದೆ. ಇದೇ ರೀತಿ ಅ ಐದು ಜನ ಪೊಲೀಸರ ಸ್ಮಾರಕ ನಿರ್ಮಿಸಿದರೆ ಸಮಾಜಕ್ಕೆ ಸಕಾರಾತ್ಮಕ ಸಂದೇಶ ಕೊಡಬಹುದು ಅಂತ ಸಚಿವರು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಚಿವ ಸುರೇಶ್ ಕುಮಾರ್ ಪತ್ರಕ್ಕೆ ಡಿಜಿ-ಐಜಿ ಪ್ರವೀಣ್ ಸೂದ್ ಯಾವ ಕ್ರಮ ತಗೋತಾರೆ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *