ವಿಧಾನಸಭೆಯಲ್ಲಿ ಸುಧಾಕರ್, ರಮೇಶ್‍ ಕುಮಾರ್ ವಾಕ್ಸಮರ- ರಾಜೀನಾಮೆಗೆ ಮುಂದಾದ ಮಾಜಿ ಸ್ಪೀಕರ್

Public TV
2 Min Read

– ಏಕವಚನದಲ್ಲಿ ಉಭಯ ನಾಯಕರ ನಡ್ವೆ ನಿಂದನೆ
– ವಲಸೆ ಹಕ್ಕಿಗಳಿಗೆ ಬಿಜೆಪಿ ಶಾಸಕರು, ಸಚಿವರು, ಸಿಎಂ ಸಾಥ್..!

ಬೆಂಗಳೂರು: ಸಂವಿಧಾನದ ಮೇಲೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕೆಟ್ಟ ಪದಗಳಲ್ಲಿ ವಾಗ್ಯುದ್ಧ ನಡೆದಿದೆ.

17 ಶಾಸಕರ ರಾಜೀನಾಮೆ ವಿಚಾರದಲ್ಲಿ ಈ ಹಿಂದಿನ ಸ್ಪೀಕರ್ ಪಕ್ಷಪಾತವಾಗಿ ನಡೆದುಕೊಂಡ್ರು ಅಂತ ಸದನದಲ್ಲಿ ಸಚಿವ ಡಾ.ಸುಧಾಕರ್ ಆರೋಪಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಸುಧಾಕರ್ ವಿರುದ್ಧ ಅಶ್ಲೀಲ ಮತ್ತು ಕೆಟ್ಟ ಶಬ್ಧ ಪ್ರಯೋಗ ಮಾಡಿದರು. ಈ ವೇಳೆ ವಾಕ್ಸಮರವೇ ನಡೆದು ಹೋಯ್ತು.  ಇದನ್ನೂ ಓದಿ: ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್‍ವೈ ಕಾಲೆಳೆದ ರಮೇಶ್ ಕುಮಾರ್

ಬಿಜೆಪಿ ಶಾಸಕರು ಸಚಿವ ಸುಧಾಕರ್ ಅವರಿಗೆ ಸಾಥ್ ನೀಡಿದರು. ಅಷ್ಟೇ ಅಲ್ಲದೆ ಸದನದ ಒಳಗೆಯೇ ಇದ್ದ ನೂತನ ಸಚಿವರು ಸಹ ಅಬ್ಬರಿಸಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು. ಈ ನಡುವೆ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಿದಾಗ ವಲಸೆ ಹಕ್ಕಿಗಳ ಗುಂಪು ಸಿಎಂ ಯಡಿಯೂರಪ್ಪ ಸುತ್ತುವರಿದಿತ್ತು.

ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದು ಶಾಸಕರಾಗಿ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್ ಅವರು ಸುಧಾಕರ್ ಅವರ ಬೆನ್ನಿಗೆ ನಿಲ್ಲಬೇಕು ಅಂತ ಮನವಿ ಮಾಡಿದರು. ಅಷ್ಟೇ ಅಲ್ಲ ರಮೇಶ್ ಕುಮಾರ್ ಬಾಸ್ಸರ್ಡ್ ಅಂತ ಪದ ಬಳಕೆ ಮಾಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ರಮೇಶ್ ಕುಮಾರ್ ಸಸ್ಪೆಂಡ್‍ಗೆ ಒತ್ತಾಯಿಸಬೇಕು ಎಂದು ಹೇಳಿದರು. ಆಗ ಸಿಎಂ ಕೂಡ ಸಾಥ್ ನೀಡುವುದಾಗಿ ಹೇಳಿ ನಗುನಗುತ್ತಾ ರಮೇಶ್ ಜಾರಕಿಹೊಳಿ ಬೆನ್ನುತಟ್ಟಿದರು. ಸ್ಪೀಕರ್ ಕೆಲಕಾಲ ಆಗ ಸಭೆ ಮುಂದೂಡಿದರೂ ವಿಧಾನಸಭೆ ಸಭಾಂಗಣದಲ್ಲಿ ಇರುವ ಸಿಎಂ, ಸಚಿವರು, ಬಿಜೆಪಿ ಶಾಸಕರು ಇದ್ದು ಚರ್ಚೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಈ ಬೆನ್ನಲ್ಲೇ ಸದನದಿಂದ ಹೊರ ನಡೆದ ರಮೇಶ್ ಕುಮಾರ್ ಅವರು ನೇರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ಈ ವಿಚಾರ ಗೊತ್ತಾಗಿ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೌಡಾಯಿಸಿ, ರಮೇಶ್ ಕುಮಾರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಬಿಜೆಪಿ ಸುಧಾಕರ್ ಪರ ನಿಂತಿದ್ದು, ಕಾಂಗ್ರೆಸ್ ರಮೇಶ್ ಕುಮಾರ ಪರ ನಿಂತಿದೆ. ಉಭಯ ಪಕ್ಷಗಳು ನಾಳೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ.

ಕಲಾಪದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಧಾಕರ್, ನನ್ನ ವಿರುದ್ಧ ಕಾಂಗ್ರೆಸ್‍ನವರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದಾರೆ. ನಾಳೆ ನಾವು ಎಲ್ಲ ಬಿಜೆಪಿ ಸದಸ್ಯರೂ ರಮೇಶ್ ಕುಮಾರ್ ಉಚ್ಛಾಟನೆಗೆ ನಿರ್ಧರಿಸಿದ್ದೇವೆ. ನಾಳೆ ಸದನದಲ್ಲಿ ರಮೇಶ್ ಕುಮಾರ್ ಉಚ್ಛಾಟನೆಗೆ ನಾವು ಒತ್ತಾಯಿಸುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *