ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ – ಗೋಲಗುಂಬಜ್ ಸುತ್ತ ನಿತ್ಯ ಶುಚಿತ್ವ ಮಾಡ್ತಾರೆ ವಿಜಯಪುರದ ರಮೇಶ್ ಕುಲಕರ್ಣಿ!

Public TV
2 Min Read

ವಿಜಯಪುರ: ವಿಜಯಪುರ ಎಂದು ಹೇಳುತ್ತಿದ್ದಂತೆ ನಮಗೆ ಮೊದಲು ನೆನಪಾಗುವುದು ಗೋಲ್‍ಗುಂಬಜ್ ಐತಿಹಾಸಿಕ ತಾಣ. ಇಲ್ಲಿಗೆ ನಿತ್ಯ ಸಾವಿರಾರೂ ಪ್ರವಾಸಿಗರೂ ಬಂದು ಹೋಗುತ್ತಾರೆ. ಯಾರೂ ಕೂಡ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ. ಆದರೆ ಇಂದು ನಮ್ಮ ಪಬ್ಲಿಕ್ ಹೀರೋ 76 ವರ್ಷದ ರಮೇಶ್ ಕುಲಕರ್ಣಿಯವರು ಇಳಿವಯಸ್ಸಿನಲ್ಲಿಯೂ ಕೂಡ ಪ್ರತಿನಿತ್ಯ ಸ್ವಚ್ಛತಾ ಕಾರ್ಯ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಮೇಶ್ ಕುಲಕರ್ಣಿಯವರು (76) ಜಿಲ್ಲೆಯ ಸ್ಟೇಷನ್ ರಸ್ತೆಯ ಗಣೇಶ ನಗರದ ನಿವಾಸಿಯಾಗಿದ್ದಾರೆ. ಇವರು ಸೇನೆಯ ಸರ್ಜನ್ ಹಾಗೂ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿಯೂ ಕೂಡ ನಿತ್ಯ ಗೋಲ್‍ಗುಂಬಜ್ ಬರುವ ಇವರು ಕೈಯಲ್ಲಿ ಬಡಿಗೆ ಹಾಗೂ ಚಿಲ ಹಿಡಿದು ಸ್ಥಳದಲ್ಲಿರುವ ಕಸ-ಕಡ್ಡಿ, ವಾಟರ್ ಬಾಟಲ್‍ಗಳನ್ನು ಆಯ್ದು ಶುಚಿಗೊಳಿಸುತ್ತಾರೆ.

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲು ದಿನನಿತ್ಯ ವಾಕಿಂಗ್ ಬರುತ್ತಿದ್ದೆ. ಈ ವೇಳೆ ಅನೇಕ ಪ್ರವಾಸಿಗರು ಸ್ಥಳದಲ್ಲಿ ಗಲೀಜು ಮಾಡಿ ಹೋಗುತ್ತಿದ್ದನ್ನು ಕಂಡು ಬೇಸರವಾಗುತ್ತಿತ್ತು. 2014ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿ ಅಂದಿನಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇನೆ. ದಿನ ನಿತ್ಯ ಇಲ್ಲಿಗೆ ಬಂದು ಸ್ವಚ್ಛಗೊಳಿಸುತ್ತೇನೆ. ಈ ಕುರಿತು ಪ್ರವಾಸಕ್ಕೆ ಬರುವ ವಿದೇಶಿಗಳು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸುತ್ತಾರೆ. ಆದರೆ ಸ್ಥಳೀಯರು ನಿಮಗೆ ಎಷ್ಟು ಹಣ ಕೊಡುತ್ತಾರೆ ಎಂದು ಕೇಳುತ್ತಾರೆ. ಇವರಿಗೆ ದೇಶಾಭಿಮಾನದ ಬಗ್ಗೆ ಕಾಳಜಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ್ ಎಂಬ ಬ್ಯಾನರ್ ಹಾಕಿಕೊಂಡು ಸ್ಥಳಕ್ಕೆ ಬರುವ ಪ್ರವಾಸಿಗರು, ಮಕ್ಕಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾರೊಬ್ಬರ ಸಹಾಯವಿಲ್ಲದೆ ಏಕಾಂಗಿಯಾಗಿ ಸ್ವಚ್ಛತಾ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೇ ನಿರ್ವಹಿಸಿಕೊಂಡು ಹೋಗುತ್ತೇನೆ. ಸ್ವಚ್ಛತೆಯ ಬಗ್ಗೆ ಎಲ್ಲರೂ ಗಮನಹರಿಸಬೇಕು, ಮೊದಲು ನಾವು ಸ್ವಚ್ಛತೆ ಕುರಿತು ಅರಿವು ಬೆಳೆಸಿಕೊಳ್ಳಬೇಕು ಆಗ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ರವಿ ಬಿಸನಾಳ, ರಮೇಶ್ ಕುಲಕರ್ಣಿಯವರು ಹಲವು ದಿನಗಳಿಂದ ಈ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಇಳಿವಯಸ್ಸಿನಲ್ಲಿಯೂ ಕೂಡ ಉತ್ಸಾಹದಿಂದ ಸ್ವಚ್ಛತಾ ಕಾರ್ಯ ಮಾಡುತ್ತಾರೆ ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ರಮೇಶ್ ಕುಲಕರ್ಣಿಯವರು ಸ್ವಚ್ಛತಾ ಅಭಿಮಾನದ ನೈಜ ರಾಯಭಾರಿಯಾಗಿದ್ದಾರೆ. ತಮ್ಮ ಇಳಿವಯಸ್ಸಿನ ಕಾರ್ಯವು ಎಲ್ಲರಿಗೂ ಮಾದರಿಯಾಗಬೇಕಾಗಿದೆ.

https://www.youtube.com/watch?v=kWsVau7235o

Share This Article
Leave a Comment

Leave a Reply

Your email address will not be published. Required fields are marked *