ಬೆಳಗಾವಿ: ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಸಾರ್ವಜನಿಕರವಾಗಿ ಕಾಣಿಸಿಕೊಂಡಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಪಬ್ಲಿಕ್ ಟಿವಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಕೇಂದ್ರದಿಂದ ಪರಿಹಾರ ನೀಡುವುದು ಕಡಿಮೆ ಆಗುತ್ತಿದ್ದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕೇಂದ್ರದ ಬಗ್ಗೆ ನಂಬಿಕೆ ಇದ್ದು, ಕೆಲ ತಾಂತ್ರಿಕ ಸಮಸ್ಯೆಯಿಂದ ತಡವಾಗಿದೆ ಅಷ್ಟೇ. ಅಮಿತ್ ಶಾ ಕೂಡ ಭೇಟಿ ನೀಡಿದ್ದು, ಬಿಎಸ್‍ವೈ ಅವರಿಗೆ ಅವರು ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಜನರಿಗೆ ಶಾಸಕರು ಇಲ್ಲದೇ, ಸಚಿವರು ಇಲ್ಲದೇ ಸಮಸ್ಯೆ ಹೇಳಿಕೊಳ್ಳಲು ಕಷ್ಟವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆ ಅಷ್ಟೇ. ಕ್ಷೇತ್ರದ ಜನರಿಗೆ ನಾನು ಲಭ್ಯವಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದೇನೆ ಎಂದರು.
ಕಳೆದ 9 ದಿನಗಳಿಂದ ನಾನು ಕ್ಷೇತ್ರದ ಜನರ ಜೊತೆ ಇದ್ದು, ಹಳ್ಳಿಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ್ದೇನೆ. ಅಲ್ಲದೇ ತೊಂದರೆಯಲ್ಲಿ ಸಿಲುಕಿರುವ ಜನರಿಗೆ ಬೇಕಾದ ಸಹಾಯ ಮಾಡಿದ್ದೇನೆ. ನನ್ನ ಪರಿಸ್ಥಿತಿ ನೋಡಿದರೆ ನಿಮಗೆ ಆರ್ಥವಾಗಬೇಕು. ಆದರೆ ಮಾಧ್ಯಮಗಳು ನನ್ನನ್ನು ತೋರಿಸುತ್ತಿಲ್ಲ ಅಷ್ಟೇ. ನೀವು ಕೇವಲ ಒಳ್ಳೆ ರೋಡ್‍ನಲ್ಲಿ ನಿಂತು ವರದಿ ಮಾಡುತ್ತೀರಿ. ಆದರೆ ನಾವು ಪ್ರವಾಹ ಉಂಟಾಗಿರುವ ಹಳ್ಳಿಗಳಿಗೆ ಭೇಟಿ ನೀಡುತ್ತೇವೆ ಎಂದರು.
ನಾನು ಏನು ಮಾಡಿದ್ದೇನೆ ಎಂದು ಜನರು ಹೇಳುತ್ತಾರೆ. ಈ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ. ಆದ್ದರಿಂದ ನನ್ನ ಬಗ್ಗೆ ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಕ್ಷೇತದ ಜನರನ್ನು ಪ್ರಶ್ನೆ ಮಾಡಿ ಈ ಬಗ್ಗೆ ಮಾಹಿತಿ ನೀಡುತ್ತಾರೆ. ನಾವು ಮಾಡುವ ಕೆಲಸ ಕಾಮಾಲೆ ಮಾಧ್ಯಮ ಕಣ್ಣಿಗೆ ಕಾಣುತ್ತಿಲ್ಲ ಎಂದರೆ ಆದು ನನ್ನ ಸಮಸ್ಯೆಯಲ್ಲ ಎಂದು ಸಿಡಿಮಿಡಿಗೊಂಡರು.