ಪಬ್ಲಿಕ್ ಟಿವಿ ಜೊತೆ ಕ್ಷಮೆ ಕೇಳಿದ ರಮೇಶ್ ಜಾರಕಿಹೊಳಿ

Public TV
2 Min Read

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲಾ ವರದಿಗಾರರ ಜೊತೆ ಕ್ಷಮೆ ಕೇಳಿದ್ದಾರೆ.

ಮುಂಬೈನಿಂದ ಇಂದು ಬೆಂಗಳೂರಿಗೆ ಆಗಮಿಸಿದ ಅವರು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಗೋಕಾಕ್‍ನಲ್ಲಿ ವರದಿಗಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ಅವರು ನನ್ನ ಆತ್ಮೀಯರು. ಹೀಗಾಗಿ ಸಲಿಗೆಯಿಂದ ಮಾತನಾಡಿದ್ದೇನೆ. ನನ್ನಿಂದ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದರು.

ಕ್ಷಮೆ ಕೇಳಿದ ಬಳಿಕ ಮಾತನಾಡಿದ ಮಾಜಿ ಸಚಿವರು, ಪಕ್ಷದ ಮೇಲೆ ನನಗೆ ಅಸಮಾಧಾನ ಇರುವುದು ನಿಜ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಷ್ಟೇ ಅಲ್ಲದೇ ಹೈಕಮಾಂಡ್‍ಗೂ ಸವಾಲು ಹಾಕಿಲ್ಲ. ಮಗಳ ಮದುವೆ ಫೆಬ್ರವರಿ 24ರಂದು ನಡೆಯಲಿದೆ. ಹೀಗಾಗಿ ಬ್ಯುಸಿ ಆಗಿದ್ದೆ ಎಂದರು.

ನನ್ನ ಸಂಬಂಧಿಕರು ಹೆಚ್ಚಾಗಿರುವುದು ಮುಂಬೈನಲ್ಲಿ. ಮಗಳ ಮದುವೆ ಇರುವುದರಿಂದ ಕಲಾಪ ಮುಗಿಸಿಕೊಂಡು ಇಂದು ಸಂಜೆ ಕೂಡ ಮುಂಬೈಗೆ ವಾಪಸ್ ಹೋಗುತ್ತೇನೆ. ಆದರೆ ನಾನು ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದೇನೆ ಎನ್ನುವುದು ಸುಳ್ಳು. ಆದರೆ ನಾನು ಏಕಾಂಗಿಯಾಗಿದ್ದೇನೆ ಎಂದು ಹೇಳಿದರು.

ನಮ್ಮ ಸ್ನೇಹಿತರಿಗೆ ಬೇರೆ ಸಮಸ್ಯೆಗಳಿವೆ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗಳಿಗೆ ಗೈರಾಗಿದ್ದೇವು. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಜೊತೆಗೆ ಮಾತನಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಅಸಮಾಧಾನದ ಬಗ್ಗೆ ಸ್ಪಷ್ಟನೆ ನೀಡಿದರು.

ಬಿಜೆಪಿ ನಾಯಕರ ಜೊತೆಗೆ ನೀವು ಇದ್ದಿದ್ದು ನಿಜವೇ ಎಂದು ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ, ರೀ ನೀವು ಸಿಟ್ಟಿನಿಂದ ಕೇಳಬೇಡಿ. ನಗುತ್ತ ಮಾತನಾಡಿ, ನೀವು ನ್ಯಾಯಾಧೀಶರಲ್ಲ ಎಂದು ರಮೇಶ್ ಜಾರಕಿಹೊಳಿ ಉತ್ತರಿಸಿದರು.

ಬಿಜೆಪಿಯಲ್ಲಿ ನನಗೆ ಬಹಳ ಜನ ಗೆಳೆಯರಿದ್ದಾರೆ. ಅವರೆಲ್ಲರೂ ನಮಗೆ ಮಿತ್ರರು. ಪಕ್ಷದ ಸಿದ್ಧಾಂತಗಳು ಬಂದಾಗ ಮಾತ್ರ ಗಲಾಟೆ ಮಾಡಿಕೊಳ್ಳುತ್ತೇವೆ. ಅಧಿವೇಶನ ಮುಗಿಸಿಕೊಂಡು ಮುಂಬೈಗೆ ತೆರಳುತ್ತೇನೆ. ಹೀಗೆ ಮಾಡಿದ್ರೆ ಆಪರೇಷನ್ ಕಮಲವೇ? ನೀವೇ ಪ್ರಶ್ನೆ ಕೇಳುತ್ತೀರಿ, ಉತ್ತರ ಕೊಡುತ್ತೀರಿ. ನೀವೇ ನನ್ನ ವಿಲನ್ ಮಾಡುತ್ತೀರಿ, ಹೀರೋ ಮಾಡುತ್ತೀರಿ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು.

ನಾನು ಈಗಲೂ ಬಿಜೆಪಿಯ ಶಾಸಕ ಅಶ್ವಥ್ ನಾರಾಯಣ್ ಅವರ ಮನೆಗೆ ಹೋಗುತ್ತೇನೆ. ಇದು ತಪ್ಪೇ ಎಂದ ಅವರು ಕಾಂಗ್ರೆಸ್‍ನಲ್ಲಿ ಇರುವ ಹಾಗೂ ಬಿಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದೇನೆ ಎಂದು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆಗಿದ್ದೇನು?:
ಡಿಸೆಂಬರ್ ಕೊನೆಯಲ್ಲಿ ಕಾಣೆಯಾಗಿದ್ದ ರಮೇಶ್ ಜಾರಕಿಹೊಳಿ ಅವರು ಜ.3 ರಂದು ಬೆಳಗ್ಗೆ ಗೋಕಾಕ್ ನಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಡ್ಮಿಂಟನ್ ಆಟವಾಡಿ ನಿವಾಸಕ್ಕೆ ಬಂದಾಗ ಅಲ್ಲೇ ಇದ್ದ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗುತ್ತಿದ್ದಾಗ, ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಹುಚ್ಚರಿದೀರಿ ಎಂದು ರಮೇಶ್ ಅವಾಜ್ ಹಾಕಿದ್ದರು. ರಮೇಶ್ ಜಾರಕಿಹೊಳಿ ಪತ್ರಕರ್ತರಿಗೆ ಅವಾಜ್ ಹಾಕಿದ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಳಗ್ಗೆ ಗೋಕಾಕ್‍ನಲ್ಲಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *