ಬೆಳಗಾವಿ(ಚಿಕ್ಕೋಡಿ): ಮದ್ಯದ ಅಂಗಡಿಗಳ ಮಾಲೀಕರೇ ಮದ್ಯವನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಲಾಭಕ್ಕಾಗಿ ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ, ಹೆಚ್ಚಿನ ದರಕ್ಕೆ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕೊರೊನಾ ವೈರಸ್ ಹತೋಟಿಗೆ ಬರುವವರೆಗೂ ಮದ್ಯದ ಅಂಗಡಿ ಪ್ರಾರಂಭಿಸಬೇಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಸಿಎಂ ಯಡಿಯೂರಪ್ಪ ಕೂಡ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಕೊರೊನಾ ನಿಯಂತ್ರಣಕ್ಕೆ ತರಲು ರಾಜ್ಯದಲ್ಲಿ ಎಲ್ಲಾ ಸಚಿವರು, ಶಾಸಕರು ಕೆಲಸ ಮಾಡುತ್ತಿದ್ದಾರೆ. ತಬ್ಲಿಘಿ ಜಮಾತ್‍ನಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಬ್ಬಿದೆ. ರಾಜ್ಯದಲ್ಲಿ ಇನ್ನು 15 ದಿನಗಳಲ್ಲಿ ಕೊರೊನಾ ಹತೋಟಿಗೆ ಬರುವ ಆಶಾವಾದ ಇದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸುಳ್ಳು. ನನಗೆ ಫೋಟೋಗೆ ಪೋಸ್ ಕೊಟ್ಟು ಸುಳ್ಳು ಪ್ರಚಾರ ಪಡೆಯಲು ಬರುವದಿಲ್ಲ. ನಾನು ಕ್ಷೇತ್ರದಲ್ಲಿ ಹೋದರೆ ಜನ ಸೇರುತ್ತಾರೆ ಎಂಬ ಕಾರಣಕ್ಕೆ ನಾನು ಎಲ್ಲಿಯೂ ಹೋಗಿಲ್ಲ. ಆದರೆ ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.