ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಮೊರೆಹೋದ ರಮಾನಾಥ ರೈ!

Public TV
1 Min Read

ಮಂಗಳೂರು: ಮಾಜಿ ಸಚಿವ ರಮಾನಾಥ ರೈ ಅವರು ಕೇರಳದ ಕಾಸರಗೋಡು ಜಿಲ್ಲೆಯಲ್ಲಿರೋ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೇವಸ್ಥಾನದ ಮೊರೆ ಹೋಗಿದ್ದಾರೆ.

ವಿಧಾಸಭಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಸಚಿವ ರಮಾನಾಥ ರೈ ತಮ್ಮ ಮೇಲಿನ ಅಪಪ್ರಚಾರವನ್ನು ಖಂಡಿಸಿ ಇದೀಗ ನ್ಯಾಯದೇಗುಲದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಗಳಲ್ಲಿ ಬಿ. ರಮಾನಾಥ ರೈ ಮೇಲೆ ಯೂ ಆರೋಪ ಕೇಳಿಬಂದಿತ್ತು. ಅಲ್ಲದೇ ಈ ವಿಚಾರ ಮತಗಳ ಧೃವೀಕರಣಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಮನನೊಂದ ಮಾಜಿ ಸಚಿವ ರಮಾನಾಥ ರೈ ಅವರು ದೈವಸ್ಥಾನಕ್ಕೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.

ಶರತ್ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವುಂಟಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ಸುಮ್ಮನೇ ನನ್ನ ಮೇಲೆ ಆರೋಪ ಮಾಡಿದವರನ್ನು ಕರೆದು ವಿಚಾರಣೆ ನಡೆಸಿ ಎಂದು ದೈವಸ್ಥಾನದ ಸನ್ನಿಧಿಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಕಾಸರಗೋಡು ಕಾನತ್ತೂರು ಕ್ಷೇತ್ರ ಸತ್ಯ ಪ್ರಮಾಣಗಳಿಗೆ ಹೆಸರುವಾಸಿಯಾದ ಕ್ಷೇತ್ರ. ಇಲ್ಲಿ ಸುಳ್ಳು ಪ್ರಮಾಣ ಮಾಡಿದವರಿಗೆ ಅಪಾಯ ತಪ್ಪಿದ್ದಲ್ಲ ಎಂಬ ಪ್ರತೀತಿಯೂ ಇದೆ.

ಶರತ್ ಮಡಿವಾಳ ಹತ್ಯೆ: ಮಂಗಳೂರಲ್ಲಿ ಕಳೆದ ವರ್ಷ ಸಾಕಷ್ಟು ಕೋಮುಗಲಭೆಗಳು ನಡೆದಿದ್ದವು. ಈ ಗಲಭೆಯಲ್ಲಿ 2017 ರ ಜುಲೈ 7 ರಂದು ಬಂಟ್ವಾಳದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಎಂಬವರ ಹತ್ಯೆ ನಡೆದಿತ್ತು. ಈ ಕೊಲೆಯಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ತಮ್ಮ ಮಗನ ಕೊಲೆಯ ಹಿಂದೆ ಮಾಜಿ ಸಚಿವ ಬಿ. ರಮಾನಾಥ ರೈ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *