ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

Public TV
2 Min Read

ರಾಮನಗರ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೊಂಡಾಪುರ ಗ್ರಾಮದ ಪೂರ್ಣಿಮಾ ಹಾಗೂ ಪಟ್ಟಣದ ಕೇಂಬ್ರಿಡ್ಜ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಣ್ಣಘಟ್ಟ ಗ್ರಾಮದ ನಿಖಿಲ್ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ 28 ರಂದು ಶ್ರೀಲಂಕಾದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರಾಟೆ ಶಿಕ್ಷಕ ಆನಂದ್ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹ ಕರಾಟೆಯ ತರಬೇತಿ ಪಡೆದು ಶ್ರೀಲಂಕಾಗೆ ಪಯಣಿಸಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ತಂದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಅಲ್ಲದೇ ಬಡಕುಟುಂಬದ ಹೆಣ್ಣು ಮಗಳೊಬ್ಬಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡುವಂತಾಗಿದೆ.

ಬಡತನ ಮೆಟ್ಟಿ ನಿಂತ ಕರಾಟೆ ಪಟು
ಆರ್ಥಿಕ ಸಂಕಷ್ಟದಲ್ಲಿದ್ದ ಕರಾಟೆಪಟು ಪೂರ್ಣಿಮಾಗೆ ಶ್ರೀಲಂಕಾದಲ್ಲಿ ನಡೆಯಲಿದ್ದ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಳ್ಳಲು ಹಣದ ಸಮಸ್ಯೆ ಎದುರಾಗಿತ್ತು. ಪ್ರಯಾಣದ ಖರ್ಚನ್ನು ಬರಿಸುವುದಿಲ್ಲ ಎಂದು ರಾಜ್ಯದ ಕರಾಟೆ ಸಂಸ್ಥೆ ತಿಳಿಸಿದ್ದರಿಂದ ಪೂರ್ಣಿಮಾ ಸಾಕಷ್ಟು ಆತಂಕ್ಕೆ ಒಳಗಾಗಿದ್ದರು. ಅಲ್ಲದೇ ಈಗಾಗಲೇ ಸಾಕಷ್ಟು ಸಾಲ ಮಾಡಿ ಮಗಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿದ್ದ ತಂದೆ-ತಾಯಿ ಸಹ ಹಣವಿಲ್ಲದೇ ಮಗಳನ್ನು ಶ್ರೀಲಂಕಾಗೆ ಕಳುಹಿಸಲು ಹಿಂದೇಟು ಹಾಕಿದ್ದರು.

ಇದೇ ವೇಳೆ ಜಿಲ್ಲೆಯ ಹಲವು ದಾನಿಗಳು ಪೂರ್ಣಿಮಾಳ ನೆರವಿಗೆ ನಿಂತು ಧನ ಸಹಾಯ ಮಾಡಿದ್ರು. ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್ ಶಂಕರಪ್ಪ ತಮ್ಮ ಕಚೇರಿಗೆ ಪೂರ್ಣಿಮಾಳ ಕುಟುಂಬದವರನ್ನು ಕರೆಸಿಕೊಂಡು ತಮ್ಮ ವೇತನದ ಹಣದಲ್ಲಿ ಪ್ರಯಾಣಕ್ಕೆ ನೆರವಾಗಿದ್ರು. ಇದೇ ವೇಳೆ ವಾರ್ತಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ ಕ್ರೀಡಾಸಕ್ತರೋರ್ವರು ಕೂಡ ವೈಯಕ್ತಿಕವಾಗಿ 10 ಸಾವಿರ ರೂಪಾಯಿಗಳನ್ನು ನೀಡಿ ಪೂರ್ಣಿಮಾಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾಗಿದ್ರು.

ಬಂಗಾರದ ಪದಕ ಗೆದ್ದ ಖುಷಿಯಲ್ಲಿರುವ ಪೂರ್ಣಿಮಾ ತನ್ನ ಆಸೆಗೆ ನೀರೆರೆಯುವ ಮೂಲಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾದ ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದೆ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆದ್ದು ತ್ರಿವರ್ಣ ಧ್ವಜವನ್ನ ಹಿಡಿಯಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *