ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ- ನಗರವೆಲ್ಲ ಕೇಸರಿ ಮಯ

Public TV
1 Min Read

ರಾಮನಗರ: ರೇಷ್ಮೆನಗರಿ ರಾಮನಗರದ ನಗರವೆಲ್ಲ ಭಾನುವಾರ ಅಕ್ಷರಶಃ ಆರ್‌ಎಸ್‌ಎಸ್ ಪಥಸಂಚಲನದಿಂದ ಕೇಸರಿಮಯವಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬಾಲಗೇರಿ ಹಾಗೂ ಕೆಂಪೇಗೌಡ ಸರ್ಕಲ್‍ನಿಂದ ಎರಡು ಮಾರ್ಗಗಳಲ್ಲಿ ಪಥಸಂಚಲನವನ್ನ ನಡೆಸಿ ನಗರವನ್ನೆಲ್ಲ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಕೇಸರಿ ಕಹಳೆ ಮೊಳಗಿತ್ತು.

ಬಾಲಗೇರಿ ಹಾಗೂ ಕೆಂಪೇಗೌಡ ಸರ್ಕಲ್‍ನಿಂದ ಹೊರಟ ಎರಡು ಪಥಸಂಚಲನದ ಗುಂಪು ಎಂ.ಜಿ ರಸ್ತೆ ಸಮೀಪದ ಬಂಡಿಮಹಂಕಾಳಮ್ಮ ದೇವಾಲಯದ ಸಮೀಪ ಎರಡು ಪಥಸಂಚಲನಗಳು ಸಮ್ಮಿಲನಗೊಂಡು ಜಿಲ್ಲಾ ಕ್ರೀಡಾಂಗಣದತ್ತ ಸಾಗಿದವು.

ನಗರದ ಬಾಲಗೇರಿ ಸರ್ಕಾರಿ ಶಾಲಾ ಆವರಣದಿಂದ ಆರಂಭವಾದ ಪಥಸಂಚಲನದಲ್ಲಿ ಆರ್‌ಎಸ್‌ಎಸ್‍ನ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಸಹ ಭಾಗವಹಿಸಿ ಗಣವೇಷಧಾರಿಗಳ ಜೊತೆ ತಾವು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದರು.

ಕೆಂಪೇಗೌಡ ಸರ್ಕಲ್‍ನಿಂದ ಹೊರಟ ಪಥಸಂಚಲನದಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಸಿಪಿ ಯೋಗೇಶ್ವರ್ ತಮ್ಮ ಪುತ್ರರಾದ ಸಾಯಿಧ್ಯಾನ್, ಶ್ರವಣ್ ಜೊತೆಗೂಡಿ ಪಥಸಂಚಲನ ನಡೆಸಿದರು. ಅಲ್ಲದೇ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಸಹ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಎಂ.ಜಿ ರಸ್ತೆಯಲ್ಲಿ ಸಾಗಿದ ಪಥಸಂಚಲನಕ್ಕೆ ಸ್ಥಳೀಯ ನಿವಾಸಿಗಳು ರಂಗೋಲಿ ಇಟ್ಟು ಹೂವಿನ ಅಲಂಕಾರದ ಜೊತೆಗೆ ಪಥಸಂಚಲನದಲ್ಲಿದ್ದ ಗಣವೇಷಧಾರಿಗಳ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ಪಥಸಂಚಲನದ ವಿಶ್ರಾಂತಿ ಸಮಯದಲ್ಲಿ ಸಿ.ಪಿ.ಯೋಗೇಶ್ವರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಗಣವೇಷಧಾರಿಗಳು ಮುಗಿಬಿದ್ದಿದ್ದರು. ಆಗ ಯೋಗೇಶ್ವರ್ ಅವರು ಕೆಲವರ ಸೆಲ್ಫಿ ಪೋಸ್ ನೀಡಿ, ಬಳಿಕ ದೂರ ಉಳಿದರು.

Share This Article
Leave a Comment

Leave a Reply

Your email address will not be published. Required fields are marked *