ದೊಡ್ಡಗೌಡ್ರ ಕುಟುಂಬವನ್ನು ಬಿಡದ ವಾಸ್ತು, ಶಾಸ್ತ್ರ- ಮಗನ ಮದ್ವೆಗೆ ಎಚ್‍ಡಿಕೆ ದಂಪತಿಯಿಂದ ಭೂಮಿಗೆ ಶಕ್ತಿ ಪೂಜೆ

Public TV
1 Min Read

ರಾಮನಗರ: ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹ ಕಾರ್ಯ ನಡೆಯಲಿರುವ ಅರ್ಚಕರಹಳ್ಳಿ ಸಮೀಪದ ಜಮೀನಿನಲ್ಲಿ ಶುಕ್ರವಾರ ಭೂಮಿಗೆ ಶಕ್ತಿ ತುಂಬುವ ವಿಶೇಷ ಪೂಜೆ-ಹವನಗಳನ್ನ ವಾಸ್ತುತಜ್ಞರು, ಅರ್ಚಕರ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ನಡೆಸಲಿದ್ದಾರೆ.

ಅಂದಹಾಗೇ 54 ಎಕರೆ ಪ್ರದೇಶದಲ್ಲಿ ನಡೆಯಲಿರುವ ಮದುವೆ ಪ್ರದೇಶದಲ್ಲಿ ಸೆಂಟ್ರೆಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಸರ್ಕಾರಿ ಹಾಗೂ ಇತರರ ಒಡೆತನದಲ್ಲಿದೆ. ಹೀಗಾಗಿ ಮದುವೆ ಕಾರ್ಯಕ್ಕೆ ಯಾವುದೇ ವಿಘ್ನ ಉಂಟಾಗದಿರಲಿ ಎಂಬ ಉದ್ದೇಶದಿಂದ ಶುಭ ಶುಕ್ರವಾರ ವಿಶೇಷ ಪೂಜೆಯನ್ನ ಎಚ್‍ಡಿ ಕುಮಾರಸ್ವಾಮಿ ದಂಪತಿ ಹಮ್ಮಿಕೊಂಡಿದ್ದಾರೆ.

ಮಹಾಶಿವರಾತ್ರಿ ದಿನವೇ ಭೂಮಿ ಪೂಜೆ ಸಲ್ಲಿಸಲು ಅನೇಕ ಕಾರಣಗಳಿವೆ ಎನ್ನಲಾಗಿದೆ. ಶಿವನಿಗೆ ಪ್ರಿಯವಾದ ದಿನ ಶುಭಲಗ್ನವಾದ ಬೆಳಗ್ಗೆ 7.30ರಿಂದ 9.35ರೊಳಗೆ ಪೂಜೆ ಸಲ್ಲಿಸಿದರೆ ಎಲ್ಲವೂ ಶುಭವಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಕುಟುಂಬ ಸಮೇತರಾಗಿ ಎಚ್‍ಡಿಕೆ ಪೂಜೆ ಸಲ್ಲಿಸಲಿದ್ದಾರೆ.

ಇಷ್ಟು ಮಾತ್ರವಲ್ಲದೇ, ವಾಸ್ತು ಶಾಸ್ತ್ರದ ಪ್ರಕಾರವೇ ಮದುವೆ ಸೆಟ್ ಹಾಕಬೇಕಿರುವ ಹಿನ್ನೆಲೆಯಲ್ಲಿ ವಾಸ್ತು ತಜ್ಞರು ಈ ಪೂಜೆಯಲ್ಲಿ ಭಾಗಿಯಾಗಲಿದ್ದು, ವಾಸ್ತು ನಿವಾರಣಾ ಪೂಜೆಯನ್ನು ನಡೆಸಲಿದ್ದಾರೆ. ಜೋತಿಷಿಗಳು, ಶಾಸ್ತ್ರಿಗಳು, ವಾಸ್ತು ತಜ್ಞರು ಒಟ್ಟಿಗೆ ಪೂಜೆ ನೆರವೇರಿಸಲಿರುವುದು ಸಾಕಷ್ಟು ಕೂತುಹಲಕ್ಕೂ ಕಾರಣವಾಗಿದೆ.

ವಿಘ್ನ ನಿವಾರಕ ಗಣಪನಿಗೆ ಮೊದಲ ಪೂಜೆ ಸಲ್ಲಿಸಿ, ಮದುವೆ ಸೆಟ್ ಹಾಕಲು ಭೂಮಿ ಪೂಜೆ ಸಹ ನಡೆಯಲಿದೆ. ಈಗಾಗಲೇ ಕುರುಚಲು ಕಾಡಿನಂತಿದ್ದ ಜಾಗವನ್ನ ಕಳೆದ ಐದು ದಿನಗಳಿಂದ ನಿರಂತರವಾಗಿ ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡುವ ಕಾರ್ಯವನ್ನ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *