9 ಮನೆ ಕಳ್ಳತನಗೈದಿದ್ದ ಚಾಲಾಕಿ ಕಳ್ಳ ಅರೆಸ್ಟ್- 266 ಗ್ರಾಂ ಚಿನ್ನಾಭರಣ, ಬೈಕ್ ವಶ

Public TV
1 Min Read

ರಾಮನಗರ: 9 ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತ ಮಾಡಿದ್ದ ಚಾಲಾಕಿ ಕಳ್ಳನನ್ನು ಜಿಲ್ಲೆಯ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಗ್ರಾಮದ ಮೋಹನ್ ಕುಮಾರ್ ಅಲಿಯಾಸ್ ಚಿಕ್ಕತಮ್ಮಯ್ಯ, ಅಲಿಯಾಸ್ ನವೀನ್ ಬಂಧಿತ ಕಳ್ಳ. ಆರೋಪಿ ಮೋಹನ್ ಕುಮಾರ್‌ನಿಂದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯ ಬಳಸುತ್ತಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಮೋಹನ್ ಕುಮಾರ್ ನಿರ್ಜನ ಪ್ರದೇಶದ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಸುಮಾರು ಎರಡ್ಮೂರು ದಿನಗಳಿಂದ ಬೀಗ ಜಡಿದಿರುತ್ತಿದ್ದ ಮನೆಗಳನ್ನು ಗುರುತಿಸಿ, ಯಾರು ಇಲ್ಲದೆ ಇರುವ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಮನೆಗೆ ನುಗುತ್ತಿದ್ದ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತದ್ದ.

ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಸಮೀಪದ ಪಟ್ಟರೆಡ್ಡಿ ಪಾಳ್ಯದ ರಾಧಾ ಎಂಬವರು ಇತ್ತೀಚೆಗೆ ಎರಡು ದಿನಗಳ ಕಾಲ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಗೆ ಬೀಗ ಹಾಕಿದ್ದನ್ನು ನೋಡಿದ್ದ ಮೋಹನ್ ಮನೆಗೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಮೋಹನ್ ಕೃತ್ಯ ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಆರೋಪಿಗೆ ಬಲೆ ಬೀಸಿ ಬಂಧಿಸಿದ್ದಾರೆ. ಬಂಧಿತ ಕಳ್ಳ ಮೋಹನ್ ಕುಮಾರ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.

ಬಂಧಿತ ಕಳ್ಳ ಮೋಹನ್ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕುಂಬಳಗೂಡು ಪೊಲೀಸ್ ಠಾಣೆ ಹಾಗೂ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿ ಒಟ್ಟು 9 ಕಡೆಗಳಲ್ಲಿ ಮನೆಗಳವು ಮಾಡಿದ್ದ.

Share This Article
Leave a Comment

Leave a Reply

Your email address will not be published. Required fields are marked *