ಮೈಸೂರು ಎಸಿಪಿ ಸಹೋದರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಬಂಧನ

Public TV
2 Min Read

– ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ
– ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್

ರಾಮನಗರ: ಚನ್ನಪಟ್ಟಣದಲ್ಲಿ ಹಾಡಹಗಲೇ ನಡೆದಿದ್ದ ಮೈಸೂರು ಎಸಿಪಿ ಸಹೋದರಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಹಾಸನದ ರಮೇಶ್ ಅಲಿಯಾಸ್ ಜಾಕಿ, ಬೆಂಗಳೂರಿನ ಕೂಡ್ಲುಗೇಟ್‍ಯ ನೆಲ್ಸನ್, ಪ್ರಜ್ವಲ್ ಹಾಗೂ ಮಧು ಬಂಧಿತ ಆರೋಪಿಗಳು. ಚನ್ನಪಟ್ಟಣದ ಕೆ.ಎಚ್.ಬಿ. ಕಾಲೋನಿಯ ಉತ್ತೇಶ್ ಎಂಬವರ ಮನೆಗೆ ಮಾರ್ಚ್ 8ರಂದು ನುಗ್ಗಿದ್ದ ಆರೋಪಿಗಳು ಉತ್ತೇಶ್ ಅವರ ಪತ್ನಿ, ಮೈಸೂರು ಎಸಿಪಿ ಗೋಪಾಲ್ ಸೋದರಿ ಸುವರ್ಣ ಹಾಗೂ ಮಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದನ್ನೂ ಓದಿ: ತಾಯಿ-ಮಗಳ ಕುತ್ತಿಗೆ ಲಾಂಗ್ ಇಟ್ಟು ದರೋಡೆ, ಎಸಿಪಿ ಫೋಟೋ ನೋಡಿ ಪರಾರಿ

ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಮಾರಕಾಸ್ತ್ರಗಳು, 4.10 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ರೂ.ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಚನ್ನಪಟ್ಟಣದ ಎರಡು, ಬೆಂಗಳೂರಿನ ಪರಪ್ಪನ ಅಗ್ರಹಾರದ ಒಂದು ಪ್ರಕರಣ ಬೆಳಕಿಗೆ ಬಂದಿವೆ.

ಆರೋಪಿಗಳು ದರೋಡೆ ಮಾಡುವುದಕ್ಕೆ ಬಂದವರೇ ಅಲ್ಲ. ಬದಲಿಗೆ ಸುಪಾರಿ ಪಡೆದು ಬೆಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಲಕ್ಷ್ಮಣನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬಂದಿದ್ದರು. ಇವರ ಟಾರ್ಗೆಟ್ ಸಿಗದಿದ್ದ ಹಿನ್ನೆಲೆಯಲ್ಲಿ ಅಮಾಯಕರ ಮನೆಗೆ ನುಗ್ಗಿದ್ದರು.

ರೌಡಿ ಲಕ್ಷ್ಮಣನ ಮರ್ಡರ್ ವೇಳೆ ಆರೋಪಿ ಕ್ಯಾಟ್‍ಗೆ ಚನ್ನಪಟ್ಟಣದ ರೌಡಿ ಶೀಟರ್ ಧ್ರುವ ಫೈನಾನ್ಸ್ ಮಾಡಿದ್ದ. ಇದು ಲಕ್ಷ್ಮಣನ ಕೊಲೆಯ ಬಳಿಕ ವಿಚಾರ ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಪರಪ್ಪನ ಅಗ್ರಹಾರದಿಂದಲೇ ಆರೋಪಿಗಳಿಗೆ ಲಕ್ಷ್ಮಣನ ಶಿಷ್ಯ ಸುಪಾರಿ ನೀಡಿದ್ದ ಎಂಬುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ರಮೇಶ್ ಅಲಿಯಾಸ್ ಜಾಕಿ ಅಲಿಯಾಸ್ ಬ್ಲಾಕಿನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಿಕ್ಕಮಳೂರು ಸಮೀಪ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮ ರಕ್ಷಣೆಗಾಗಿ ಚನ್ನಪಟ್ಟಣ ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಕಾಲಿಗೆ ಗುಂಡಿ ಹಾರಿಸಿದ್ದರು. ಸದ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಮೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *