ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ

Public TV
2 Min Read

ರಾಮನಗರ: ಮದ್ಯಕ್ಕೆ ದಾಸರಾಗಿ ಮಕ್ಕಳನ್ನ ನಿರ್ಲಕ್ಷ್ಯದಿಂದ ಕಾಣುತ್ತಿದ್ದ ಪೋಷಕರಿಂದ ಹಿಂಸೆಗೆ ಒಳಗಾಗಿದ್ದ ಐವರು ಚಿಕ್ಕ ಚಿಕ್ಕ ಮಕ್ಕಳನ್ನು ರಾಮನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

ಆಂಧ್ರ ಮೂಲದ ದಂಪತಿಗಳ ಮಕ್ಕಳಾದ ಹನುಮಂತ (8), ವಿನೋದ್(6), ಕಾರ್ತಿ(4), ಮೂರ್ತಿ (2) ಮತ್ತು ಪ್ರಿಯಾಂಕ (7 ತಿಂಗಳ ಮಗು) ರಕ್ಷಣೆಗೆ ಒಳಗಾದ ಮಕ್ಕಳಾಗಿದ್ದಾರೆ. ಅಂದಹಾಗೇ ಕಳೆದ ಅಕ್ಟೋಬರ್ ನಲ್ಲಿ ಆಂಧ್ರ ಮೂಲದ ದಂಪತಿ ಮಕ್ಕಳೊಡನೆ ಉದ್ಯೋಗ ಅರಿಸಿ ಮಾಗಡಿ ತಾಲೂಕಿಗೆ ಆಗಮಿಸಿದ್ದಾರೆ. ಟೌನಿನ ವಿದ್ಯಾನಗರದಲ್ಲಿ ಸ್ಥಳೀಯ ಶಿಕ್ಷಕರೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದಲ್ಲಿ ಮನೆಯಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಸಣ್ಣ ಮಕ್ಕಳು ಹಾಗೂ ದಂಪತಿಗಳಿದ್ದ ಇರುವ ಕಾರಣ, ಮಾಲೀಕರು ಕಟ್ಟಡ ನಿರ್ಮಾಣವಾಗುವವರೆಗೂ, ಮನೆಯಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮದ್ಯಕ್ಕೆ ದಾಸರಾಗಿದ್ದ ದಂಪತಿ, ಮಕ್ಕಳನ್ನು ಸರಿಯಾಗಿ ಪಾಲನೆ ಮಾಡದೇ, ನಿತ್ಯ ಹಿಂಸೆ ನೀಡುತ್ತಿದ್ದರು. ಅಲ್ಲದೇ ಕಳೆದ ಮೂರು ದಿನಗಳ ಹಿಂದೆ ತಾಯಿ ಕೂಡ ಮಕ್ಕಳನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಇನ್ನು ತಂದೆಯೂ ಸರಿಯಾಗಿ ಪೋಷಣೆ ಮಾಡುತ್ತಿರಲಿಲ್ಲ. ರಾತ್ರಿ ಕುಡಿದು ಬಂದ ತಂದೆ ವಿಪರೀತವಾಗಿ ಮಕ್ಕಳಿಗೆ ಹೊಡೆದಿದ್ದಾನೆ. ಇದನ್ನು ನೋಡಲಾಗದ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರು ಸ್ವೀಕರಿಸಿದ ಸಹಾಯವಾಣಿಯ ಸಿಬ್ಬಂದಿ, ಮಾಹಿತಿ ಪಡೆದು ದಾಳಿ ಮಾಡಿ ಐದು ಮಂದಿ ಮಕ್ಕಳನ್ನು ರಕ್ಷಿಸಿದ್ದಾರೆ.

ತಂದೆ ತಾಯಿಗಳಿಬ್ಬರು ಕೆಲಸಕ್ಕೆ ತೆರಳದೇ, ಮದ್ಯಕ್ಕೆ ದಾಸರಾಗಿದ್ದರು. ಹಿರಿಯ ಮಗ ಹನುಮಂತನೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಅಕ್ಕ ಪಕ್ಕದ ಮನೆಯವರಿಂದ ದಂಪತಿಗಳು ಅನ್ನ ಮತ್ತಿತ್ತರ ಆಹಾರ ಪದಾರ್ಥಗಳನ್ನು ಪಡೆದು ಜೀವನ ಸಾಗಿಸುತ್ತಿದ್ರು. ಪ್ರತಿ ನಿತ್ಯ ದಂಪತಿ ನಡುವೆ ಜಗಳವಾಗುತ್ತಿತ್ತು. ಜೊತೆಗೆ ಕಳೆದ ಮೂರು ದಿನಗಳ ಹಿಂದೆ ಮಕ್ಕಳನ್ನು ಬಿಟ್ಟು ಹೋಗಿರುವ ತಾಯಿಯ ಸುಳಿವು ಕೂಡ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ರಕ್ಷಣೆಗೆ ಒಳಗಾಗಿರುವ ಮಕ್ಕಳಲ್ಲಿ ತೊಟ್ಟಿಲು ಕೇಂದ್ರದಲ್ಲಿ ಸಣ್ಣ ಮಗುವನ್ನು ಹಾಗೂ ಉಳಿದ ನಾಲ್ವರನ್ನು ಬಾಲಮಂದಿರದಲ್ಲಿ ಬಿಡಲಾಗಿದೆ. ಮಕ್ಕಳನ್ನು ತೊರೆದು ಹೋಗಿರುವ ತಾಯಿಯನ್ನ ಕರೆತಂದು ಪತಿ-ಪತ್ನಿಯನ್ನು ಅಧಿಕಾರಿಗಳು ಶುಕ್ರವಾರ ಮಕ್ಕಳ ಸಮಿತಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಅಲ್ಲದೇ ಮಕ್ಕಳ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *