ಶ್ರೀಗಂಧದ ಮರ ಕಡಿದು ಸಾಗಾಟಕ್ಕೆ ಮುಂದಾಗಿದ್ದ ಕಳ್ಳನ ಬಂಧನ

Public TV
1 Min Read

ರಾಮನಗರ: ಶ್ರೀಗಂಧದ ಮರ ಕಡಿದು ಕಳ್ಳತನದ ಸಾಗಾಟಕ್ಕೆ ಮುಂದಾಗಿದ್ದ ಕಳ್ಳನನ್ನು ಚನ್ನಪಟ್ಟಣ ಉಪವಿಭಾಗದ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಶಿವರಾಜು ಎಂದು ಗುರುತಿಸಲಾಗಿದೆ. ಈತ ರಾಮನಗರ ಹೊರವಲಯದ ಶೋಲೆ ಖ್ಯಾತಿಯ ರಾಮದೇವರ ಬೆಟ್ಟದ ಬುಡದಲ್ಲಿನ ಇರುಳಿಗರ ಕಾಲೋನಿಯ ನಿವಾಸಿ.

ಚನ್ನಪಟ್ಟಣ ತಾಲೂಕಿನ ಪ್ರಾದೇಶಿಕ ಅರಣ್ಯ ವಲಯದ ಚಿಕ್ಕಮಣ್ಣು ಗುಡ್ಡೆ ಮೀಸಲು ಅರಣ್ಯದ ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಶಿವರಾಜುನನ್ನ ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರಗಳನ್ನು ನಿರಂತರವಾಗಿ ಕಡಿದು ಸಾಗಾಟ ಮಾಡಲಾಗುತ್ತಿತ್ತು. ನಿರಂತರವಾಗಿ ರಾತ್ರಿಯ ವೇಳೆ ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡುವ ಮೂಲಕ ಅರಣ್ಯದಲ್ಲಿನ ಶ್ರೀಗಂಧದ ಮರಗಳನ್ನು ಕಡಿಮೆ ಮಾಡಲಾಗುತ್ತಿತ್ತು. ಇದು ಅರಣ್ಯ ಇಲಾಖೆಗೆ ಸಾಕಷ್ಟು ತಲೆನೋವಾಗಿತ್ತು.

ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶಿವರಾಜುವನ್ನು ಬಂಧಿಸಿ, 1.5 ಕೆ.ಜಿ ತೂಕದ ಶ್ರೀಗಂಧದ ಸಣ್ಣ ಸಣ್ಣ ತುಂಡುಗಳು, ಮೂರು ದೊಡ್ಡ ತುಂಡುಗಳು, ಮಚ್ಚು, ಗರಗಸ, ಹಾರೆಯನ್ನು ವಶಪಡಿಸಿಕೊಂಡು, ಅರಣ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *