‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯರ ಹೊಸ ಚಿತ್ರದ ಅಪ್ ಡೇಟ್

Public TV
1 Min Read

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮಾ ರಾಮಾ ರೇ ಖ್ಯಾತಿಯ ಸತ್ಯ (Satya) ಇದೀಗ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಪಾತ್ರವೊಂದನ್ನೂ ನಿರ್ವಹಿಸಿದ್ದಾರೆ. ಸತ್ಯ ಪಿಕ್ಚರ್ಸ್ ಗೂಡಿನಿಂದ ಈ ಹೊಸ ಸಿನಿಮಾ ಬರುತ್ತಿದ್ದು, ಚಿತ್ರಕ್ಕೆ X&Y ಎಂದು ಹೆಸರಿಟ್ಟಿದ್ದಾರೆ.

ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ. ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ಸತ್ಯ.

ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ.  ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ.

 

ಇದು ಈ ಸಂಸ್ಥೆಯ ನಾಲ್ಕನೇ ಸಿನಿಮಾ. ಈ ಹಿಂದಿನ ಮೂರು ಚಿತ್ರಗಳಿಗೆ ನೀವು ತೋರಿದ ಪ್ರೀತಿ, ತಪ್ಪುಮಾಡಿದಾಗ ನೀವು ತಿದ್ದಿದ ರೀತಿ, ಈ ಸಿನಿಮಾದಲ್ಲೂ ಬೇಕೇ ಬೇಕೆಂಬ ಬೇಡಿಕೆ ನಮ್ಮದು. ಮೊದಲ ಪೋಸ್ಟರನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ನಿಮ್ಮ ಅನಿಸಿಕೆಗಾಗಿ ಎದುರುನೋಡುತ್ತಿದ್ದೇನೆ ಎಂದು ಸತ್ಯ ಕೇಳಿಕೊಂಡಿದ್ದಾರೆ.

Share This Article