ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

Public TV
1 Min Read

ಅಯೋಧ್ಯೆ: ಜನವರಿ 22 ರಂದು ರಾಮಮಂದಿರದಲ್ಲಿ (Ayodhya Ram Mandir) ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠೆಗೆ (Pran Prathistha Ceremony) ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದೀಗ ರಾಮಲಲ್ಲಾ ಮೂರ್ತಿಯು (Lord Rama Idol) ರಾಮಮಂದಿರವನ್ನು ಪ್ರವೇಶಿಸಿದೆ.

ಹೌದು. ಇಂದು ಸಂಜೆ ಭಗವಾನ್ ರಾಮನ ವಿಗ್ರಹವನ್ನು ಹೊತ್ತ ಟ್ರಕ್ ಅನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ರಾಮ ಮಂದಿರದ ಆವರಣಕ್ಕೆ ತರಲಾಯಿತು. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ . ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

ಇದಕ್ಕೂ ಮುನ್ನ ಜಲಯಾತ್ರೆ, ತೀರ್ಥಯಾತ್ರೆ, ಕುಮಾರಿ ಸುವಾಸಿನಿ ಪೂಜೆ, ವರ್ಧಿನಿ ಪೂಜೆಗಳು ನೆರವೇರಿದವು. ನಿನ್ನೆಯೇ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳವನ್ನು ಶುದ್ದೀಕರಿಸಿ. ವಿಶೇಷ ಪೂಜೆ ಮಾಡಲಾಗಿತ್ತು. ಅಲ್ಲದೇ ರಾಮಲಲ್ಲಾ ಮೂರ್ತಿಗೆ ವಿಶೇಷ ಸ್ನಾನಾದಿಗಳನ್ನು ಮಾಡಿಸಿ, ಮೂರ್ತಿಯ ಕಣ್ಣುಗಳಿಗೆ ಪಟ್ಟಿ ಕಟ್ಟಲಾಯ್ತು. ಈ ರಾಮ್‍ಲಲ್ಲಾ ಮೂರ್ತಿಯನ್ನು ನಾಳೆ ಗರ್ಭಗುಡಿಯೊಳಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಬಾಲರಾಮನ ಕಣ್ಣುಗಳಿಗೆ ಕಟ್ಟಿರುವ ಪಟ್ಟಿಯನ್ನು ಜನವರಿ 22ರಂದು ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ತೆರೆಯಲಾಗುತ್ತದೆ.

ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ನಿರ್ಮೋಹಿ ಅಖಾಡದ ಮಹಾಂತ ದೀನೇಂದ್ರ ದಾಸ್ ಮತ್ತು ರಾಮಮಂದಿರದ ಅರ್ಚಕ ಸುನೀಲ್ ದಾಸ್ ಗರ್ಭಗುಡಿಯಲ್ಲಿರುವ ಪ್ರಾಣಪ್ರತಿಷ್ಠಾಪನೆಯ ಪೀಠಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಈ ಮಧ್ಯೆ ರಾಮಮಂದಿರದ ಆಮಂತ್ರಣ ಪತ್ರಿಕೆಯಲ್ಲಿ ರಾಮ್‍ಲಲ್ಲಾ ಮೂರ್ತಿ ಮಾದರಿಯ ಫೋಟೋ ಮುದ್ರಿಸಲಾಗಿದೆ. ಇದು ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವರ್ಣಿಸಿದ ಮಾದರಿಯಲ್ಲಿಯೇ ರಾಮ್‍ಲಲ್ಲಾ ಫೋಟೋ ಇದೆ. ಶಿಲ್ಪಿ ಅರುಣ್ ಯೋಗಿರಾಜ್ ಕಲ್ಪನೆಯಲ್ಲಿ ಮೂಡಿದ ರಾಮಲಲ್ಲಾ ಮೂರ್ತಿ ಇದೇನಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ರಾಮಲಲ್ಲಾ ಮೂರ್ತಿಯ ಕೆತ್ತನೆಯನ್ನು ಕಣ್ಣಾರೆ ಕಂಡಿರುವ ಆಚಾರ್ಯ ಕರುಣಾನಿಧಾನ್ ಉತ್ತರ ನೀಡಿದ್ದಾರೆ.

Share This Article