ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

Public TV
2 Min Read

– ದಸರಾ, ದೀಪಾವಳಿಗೂ ಸಿದ್ಧತೆ

ನವದೆಹಲಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದದ ಕುರಿತ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದ್ದು, ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮೂಲಕ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆ ನಗರದಲ್ಲಿ ನಿಯೋಜಿಸಲಾಗಿದೆ. ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಮೆರವಣಿಗೆಗಳಲ್ಲಿ ಗುಲಾಲ್ (ಬಣ್ಣ) ಬಳಸದಂತೆ ಪೂಜಾ ಸಮಿತಿಗೆ ತಿಳಿಸಿದ್ದೇವೆ. ಇದರ ಬದಲಿಗೆ ಹೂಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಭದ್ರತಾ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ಗುರುತಿಸಲು ಜಿಲ್ಲಾಡಳಿತ ಈಗಾಗಲೇ ಪ್ರಾರಂಭಿಸಿದೆ. ಸ್ಥಳೀಯ ಅತಿಥಿ ಗೃಹಗಳು, ಧರ್ಮಶಾಲೆಗಳು, ಶಾಲಾ ಕಾಲೇಜುಗಳಲ್ಲಿ ವಸತಿ ಸೌಲಭ್ಯಗಳನ್ನು ಬಳಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಸೋಮವಾರದಿಂದ ಪ್ರಾರಂಭವಾಗಲಿದ್ದು, ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ. ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚು ಜನ ಆಗಮಿಸುತ್ತಿರುವ ಹಿನ್ನೆಲೆ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಸ್ಥಳೀಯ ಗುಪ್ತಚರ ಘಟಕಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುತ್ತಿರುವ ಹಾಗೂ ಉಳಿದುಕೊಂಡಿರುವವರ ವಿವರ ಹಾಗೂ ವಸ್ತುಗಳನ್ನು ಸಹ ಪರಿಶೀಲಿಸುವಂತೆ ಸೂಚಿಸಲಾಗಿದೆ. ಬೆದರಿಕೆ ಕರೆ ಕುರಿತು ಮಾಹಿತಿ ಬಂದಿದೆ ಎಂದು ಗುಪ್ತಚರ ದಳ ವರದಿ ನೀಡಿದ ಹಿನ್ನೆಲೆ ಈ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮ ಜನ್ಮ ಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನವೆಂಬರ್‍ನಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಸ್ಥಳೀಯ ಆಡಳಿತವು ಭದ್ರತಾ ವ್ಯವಸ್ಥೆ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸಹ ಸೂಚಿಸಲಾಗಿದೆ.

ಇದೆಲ್ಲದರ ಮಧ್ಯೆ ಸರಯು ನದಿಯ ಮಾಲಿನ್ಯವನ್ನು ತಡೆಗಟ್ಟಲು ದುರ್ಗಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಇದಕ್ಕೆ ಪರ್ಯಾಯವಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಹೊಂಡಗಳನ್ನು ಅಗೆಯಲಾಗಿದೆ. ಇದರಲ್ಲೇ ದೇವಿಯ ಭೂಮಿ ವಿಸರ್ಜನೆಯನ್ನು ನಡೆಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *