ರಾಮಲಲ್ಲಾ ಮೂರ್ತಿ ಮಗುವಿನಂತೆ ಕಾಣುತ್ತಿಲ್ಲ- ಕೆಂಗಣ್ಣಿಗೆ ಗುರಿಯಾದ ದಿಗ್ವಿಜಯ ಸಿಂಗ್

Public TV
2 Min Read

ಭೋಪಾಲ್:‌ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆ ಮಾಡಲಿರುವ ರಾಮಲಲ್ಲಾ ಮೂರ್ತಿ (Pran Prathistha Ceremony) ಮಗುವಿನಂತೆ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ (Digvijay Singh) ಅವರು ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ, ವಿವಾದಿತ ರಾಮಲಲ್ಲಾನ ವಿಗ್ರಹವನ್ನು ನಾಶಪಡಿಸಿದ ವಿಗ್ರಹ ಎಲ್ಲಿದೆ? ಎರಡನೇ ಪ್ರತಿಮೆಯ ಅಗತ್ಯವೇನು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ, ಸ್ವರೂಪಾನಂದ ಜಿ ಮಹಾರಾಜ್ ಕೂಡ ರಾಮನ ವಿಗ್ರಹವನ್ನು ಸ್ಥಾಪಿಸಲು ಸಲಹೆ ನೀಡಿದ್ದರು. ರಾಮಜನ್ಮಭೂಮಿ ದೇವಸ್ಥಾನ ಮಗುವಿನ ರೂಪದಲ್ಲಿರಬೇಕು. ತಾಯಿ ಕೌಶಲ್ಯೆಯ ಮಡಿಲಲ್ಲಿರಬೇಕು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ ಎಂದು ಬರೆದಿದ್ದಾರೆ.

ಈ ರೀತಿ ಬರೆದುಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿಗರು ಹಾಗೂ ರಾಮನ ಭಕ್ತರು ಸಿಡಿದೆದ್ದಿದ್ದಾರೆ. ಸಿಂಗ್‌ ಹೇಳಿಕೆಗೆ ಪರ-ವಿರೋಧ ಕಾಮೆಂಟ್‌ಗಳು ಬರುತ್ತಿದೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ಅಂದರೆ ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಯಿತು. ತಡರಾತ್ರಿ ಗರ್ಭಗುಡಿಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಸುಕಿನಿಂದ ಮುಚ್ಚಲ್ಪಟ್ಟ ವಿಗ್ರಹದ ಮೊದಲ ಫೋಟೋವನ್ನು ಬಹಿರಂಗಪಡಿಸಲಾಯಿತು.

ರಾಮಲಲ್ಲಾ ವಿಗ್ರಹವನ್ನು ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ವಿಗ್ರಹವು 51 ಇಂಚು ಎತ್ತರ ಮತ್ತು 1.5 ಟನ್ ತೂಕವಿದೆ. ಕಮಲದ ಮೇಲೆ ನಿಂತಿರುವ ಐದು ವರ್ಷದ ಮಗುವಿನಂತೆ ರಾಮನನ್ನು ವಿಗ್ರಹವು ಚಿತ್ರಿಸುತ್ತದೆ. ಈ ನಡುವೆ ಜನವರಿ 22 ರಂದು ನಿಗದಿಯಾಗಿರುವ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ತಯಾರಿಗಾಗಿ ಗುರುವಾರ ಅಯೋಧ್ಯಾ ನಗರವನ್ನು ರೋಮಾಂಚಕ ಹೂವುಗಳಿಂದ ಅಲಂಕರಿಸಲಾಗಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಮುಖ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಿದೆ. ಸಮಾರಂಭಕ್ಕೆ ಹಲವಾರು ಸೆಲೆಬ್ರಿಟಿಗಳು ಮತ್ತು ಹೆಸರಾಂತ ವ್ಯಕ್ತಿಗಳನ್ನು ಸಹ ಆಹ್ವಾನಿಸಲಾಗಿದೆ.

Share This Article