ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

Public TV
2 Min Read

ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ರಿವ್ಯೂ ಮಾತ್ರ ಉತ್ತಮವಾಗಿ ಬಂದಿರಲಿಲ್ಲ.

ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್ ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು. ಇದೆಲ್ಲದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆ ಹಾಕಿರಲಿಲ್ಲ. ಇದೀಗ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ‘ರಾಜರಥ’ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಸ್ವತಃ ಈ ಚಿತ್ರದ ರಿವ್ಯೂ ಬರೆದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಕ್ಷಿತ್ ಬರದಿರುವ ರಿವ್ಯೂ:
ನಾನು ನಿನ್ನೆ ಸಂಜೆ ಚಿತ್ರ ನೋಡಿದ್ದೇನೆ. ಕೆಲವು ದೋಷಗಳ ನಡುವೆಯೂ ಈ ಚಿತ್ರ ಇಷ್ಟವಾಗುತ್ತೆ. ರಿವ್ಯೂಗಳು ಏನು ಹೇಳಿವೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಹಲವು ಭಾವನೆಗಳ ಮೂಲಕ ಈ ಚಿತ್ರವನ್ನು ನಿರ್ಮಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ನಾನು ಥಿಯೇಟರ್‍ಗೆ ಎಂಟ್ರಿ ಕೊಟ್ಟಾಗ ನನ್ನ ಮೈಂಡ್‍ನಲ್ಲಿ ಈ ಚಿತ್ರದಲ್ಲಿಯ ತಪ್ಪಗಳೇನು? ಯಾಕೆ ಈ ರೀತಿ ಕೆಟ್ಟ ರಿವ್ಯೂ ಬರೆದಿದ್ದಾರೆ? ಒಬ್ಬ ಫಿಲ್ಮ್ ಮೇಕಿಂಗ್‍ನ ವಿದ್ಯಾರ್ಥಿಯಾಗಿ ಇದನ್ನು ಕಲಿಯಲು ನಾನು ಬಯಸಿದ್ದೆ. ಆದರೆ, ಈ ಚಿತ್ರ ನೋಡಿದ ಮೇಲೆ ಅನೂಪ್ ಭಂಡಾರಿಯ ಟಾಲೆಂಟ್ ಬಗ್ಗೆ ಮೆಚ್ಚುಗೆಯಾಯಿತು ಎಂದಿದ್ದಾರೆ.

ಅನೂಪ್ ಒಬ್ಬ ಪ್ರತಿಭಾವಂತ ನಿರ್ದೇಶಕ ಅನ್ನೋದರಲ್ಲಿ ಎರಡನೇ ಮಾತು ಬೇಡ. ಬಾಲಿವುಡ್‍ನ ಚಿತ್ರಗಳ ನಿರ್ದೇಶನಕ್ಕೆ ಅವರಿಗೆ ಆಫರ್‍ಗಳು ಬಂದಿದ್ದವು. ಆದರೆ, ಅವುಗಳನ್ನು ತಿರಸ್ಕರಿಸಿ ಕನ್ನಡಕ್ಕಾಗಿ ಅವರು ಇಲ್ಲೆ ಉಳಿದುಕೊಂಡರು. ಕನ್ನಡ ಚಿತ್ರರಂಗ ಬೆಳೆಸಲು ನಮ್ಮ ಜತೆ ನಿಂತರು. ಇದೀಗ ಅವರ ಜತೆ ನಾವು ನಿಲ್ಲಬೇಕಾಗಿದೆ.

ಒಬ್ಬ ನಿರ್ದೇಶಕ ಸುಂದರವಾದ ಕಲ್ಪನೆಯೊಂದಿಗೆ ಚಿತ್ರ ಮಾಡುತ್ತಾನೆ. ನೀವು ಒಂದು ಚಿತ್ರದ ಬಗ್ಗೆ ಕಳಪೆ ರಿವ್ಯೂ ಬರೆಯಲು ಕೇವಲ 10 ನಿಮಿಷ ತೆಗೆದುಕೊಳ್ಳುತ್ತೀರಿ. ಆದರೆ, ಒಂದು ಚಿತ್ರವನ್ನು ರೆಡಿ ಮಾಡಲು ಒಂದು ವರ್ಷ ಬೇಕಾಗುತ್ತೆ. ನಾನು ಅನೂಪ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರು ನನಗೆ ಅಷ್ಟು ಆತ್ಮಿಯರೂ ಅಲ್ಲ. ಆದರೆ, ಅವರ ಟಾಲೆಂಟ್‍ಗೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಅನೂಪ್ ನನ್ನ ಗೆಳೆಯ ಇರಬಹುದು. ಹೆಚ್ಚು ಎಂದರೆ ನಾವು 5 ರಿಂದ 10 ಸಲ ಭೇಟಿಯಾಗಿರುತ್ತೇವೆ. ಇದಕ್ಕಾಗಿ ಅವರನ್ನು ಬೆನ್ನುತಟ್ಟುತ್ತಿದ್ದೇನೆ ಎಂದು ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸಿರುವ ರಕ್ಷಿತ್, ರಾಜರಥ ಚಿತ್ರವನ್ನು ಅತ್ಯಂತ ಉತ್ಸಾಹ, ಕಠಿಣ ಪರಿಶ್ರಮದಿಂದ ನಿರ್ಮಿಸಲಾಗಿದೆ. ಚಿತ್ರದ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಲ್ಲ. ಇದೊಂದು ಕೆಟ್ಟ ಚಿತ್ರ ಎನ್ನುವುದಾದರೆ ಓಕೆ. ಆದರೆ ಅನೂಪ್ ಪ್ರತಿಭೆ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನ ಇದ್ದಂತೆ. ಅವರೊಬ್ಬ ಆಸ್ತಿ. ಇಂತಹ ಪ್ರತಿಭೆಗಳನ್ನು ಹುರುದುಂಬಿಸಬೇಕಾಗಿದೆ. ಬಾಲಿವುಡ್ ಚಿತ್ರ ನಿರ್ದೇಶನಕ್ಕೂ ಅವರಿಗೆ ಅವಕಾಶ ಬಂದಿತ್ತು. ಆದರೆ ಅವರ ಒಲವು ಕನ್ನಡ ಚಿತ್ರಗಳ ಕಡೆಗಿತ್ತು. ಅಂದು ಅವರು ನಮ್ಮ ಪರವಾಗಿ ನಿಂತರು, ಇಂದು ನಾವು ಅವರ ಪರವಾಗಿ ನಿಲ್ಲೋಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

https://twitter.com/rakshitshetty/status/979222138837061632

Share This Article
Leave a Comment

Leave a Reply

Your email address will not be published. Required fields are marked *