ಕಾಂಗ್ರೆಸ್ ಸರ್ಕಾರ ಇದ್ದಾಗ ಭಾರತದ ಖಜಾನೆ ಖಾಲಿ ಖಾಲಿ: ದುಷ್ಯಂತ್ ಕುಮಾರ್ ಗೌತಮ್

Public TV
2 Min Read

ಮಂಡ್ಯ: ಕಾಂಗ್ರೆಸ್‍ನ ಯುಪಿಎ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿತ್ತು, ಭಯೋತ್ಪಾದನೆ ಹೆಚ್ಚಾಗಿತ್ತು. ಆದರೆ ಕಳೆದ 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಖಜಾನೆ ತುಂಬಿಸುವ ಮೂಲಕ ಆರ್ಥಿಕತೆ ಸುಧಾರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ದುಷ್ಯಂತ್ ಕುಮಾರ್ ಗೌತಮ್ ಹೇಳಿದ್ದಾರೆ.

ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆ ಕುಸಿದಿತ್ತು, ಭಯೋತ್ಪಾದನೆ ಹೆಚ್ಚಾಗಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಯನ್ನು ತಹಬದಿಗೆ ತಂದಿದ್ದು, ಭಯೋತ್ಪಾದನೆ ಇಲ್ಲದಂತಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೆ ತಿರುಗುತ್ತಿದೆ: ಸದಾನಂದಗೌಡ

ಕೊರೊನಾ ಸಂಕಷ್ಟದಲ್ಲಿ ಬಿಜೆಪಿ ಸರ್ಕಾರ ಕ್ರಾಂತಿಕಾರಕ ಕೆಲಸ ಮಾಡಿದೆ. ದೇಶದಲ್ಲಿನ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಶವಸಂಸ್ಕಾರ ಮಾಡಲು ಯಾರೂ ಮುಂದೆ ಬಾರದಿದ್ದಾಗ ನಮ್ಮ ಕಾರ್ಯಕರ್ತರು ಶವ ಸಂಸ್ಕಾರ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಖಜಾನೆ ಖಾಲಿಯಾಗಿದ್ದರಿಂದ ಪಿಪಿಇ ಕಿಟ್ ಖರೀದಿಸಲು ಸರ್ಕಾರದಲ್ಲಿ ಹಣ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಮೋದಿ ಅವರು ತೆಗೆದುಕೊಂಡ ನಿರ್ಧಾರಗಳಿಂದ ಕೊರೊನಾ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಭಾರತದಲ್ಲಿ ಉಚಿತವಾಗಿ 2 ಡೋಸ್ ಲಸಿಕೆ ನೀಡಲಾಗಿದೆ. ಕೊರೊನಾ ನಿಭಾಯಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

ಕಾಂಗ್ರೆಸ್‍ನದ್ದು ತಾಲಿಬಾನಿ ಸಂಸ್ಕೃತಿಯಾಗಿದೆ. ತಾಲಿಬಾನಿಗಳನ್ನು ಪೋಷಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ವಿಶ್ವಸಂಸ್ಥೆಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ್ದು, ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ದೊಡ್ಡ ಪರಿವರ್ತನೆ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಅಂತ್ಯೋದಯ ರೀತಿಯಲ್ಲಿ ಬಡತನ ನಿರ್ಮೂಲನೆ ಮಾಡಲು ಕ್ರಮ ವಹಿಸಲಾಗಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *