ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

Public TV
3 Min Read

ನವದೆಹಲಿ: ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸಿಬಿಐ ಸಲ್ಲಿಸಿದ್ದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಅರ್ಜಿ ವಿಚಾರಣೆ ವೇಳೆ ರಾಜೀವ್ ಕುಮಾರ್ ಅವರು ವಿಚಾರಣೆಗೆ ಹಾಜರಾಗಬೇಕು, ಆದರೆ ಅವರನ್ನು ಬಂಧಿಸುವಂತಿಲ್ಲ ಎಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ ಆದೇಶಿಸಿತು.

ಸಿಬಿಐ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷರ್ ಮೆಹ್ತಾ ಹಾಜರಾಗಿದ್ದರೆ, ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದರು.

ಕೆಕೆ ವೇಣುಗೋಪಾಲ್ ಅವರು ಆರಂಭದಲ್ಲಿ, ರಾಜೀವ್ ಕುಮಾರ್ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ ಸಲ್ಲಿಕೆಯಾದ ದಾಖಲೆಗಳು ತಿರುಚಲ್ಪಟ್ಟಿದೆ. ಯಾಕೆ ತಿರುಚಲ್ಪಟ್ಟಿದೆ ಎಂದು ಕೇಳಿದ್ದಕ್ಕೆ ಇದೂವರೆಗೆ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಿಲ್ಲ. ಫೋನ್ ಕಾಲ್‍ಗಳ ಮಾಹಿತಿ ಡಿಲೀಟ್ ಆಗಿದೆ. ಯಾರ ಯಾರಿಗೆ ಕಾಲ್ ಮಾಡಿದ್ದಾರೆ ಅವುಗಳು ಡಿಲೀಟ್ ಆಗಿದೆ. ಪ್ರಕರಣದ ಆರೋಪಿಯಾಗಿರುವ ಸುದಿಪ್ಟೋ ಸೆನ್ ಫೋನ್ ಮರಳಿ ನೀಡಲಾಗಿದೆ ಎಂದು ತಿಳಿಸಿದರು.

ವಿಚಾರಣೆಗೆ ಬಂದಿದ್ದ ಸಿಬಿಐ ಅಧಿಕಾರಿಗಳನ್ನು ಬಸ್ಸಿನಲ್ಲಿ ತುಂಬಿಸಲಾಗಿದೆ. ಠಾಣೆಗಳಲ್ಲಿ ಹಲವು ಗಂಟೆಗಳ ಕಾಲ ಅಧಿಕಾರಿಗಳನ್ನು ಪೊಲೀಸರು ವಶದಲ್ಲಿ ಇಟ್ಟಿದ್ದಾರೆ. ಸಿಬಿಐ ಜಂಟಿ ನಿರ್ದೇಶಕರ ಮನೆಗೆ ಮುತ್ತಿಗೆ ಹಾಕಲಾಗಿತ್ತು. ಪಶ್ಚಿಮ ಬಂಗಾಳ ಪೊಲೀಸರ ಹಿಂದೆ ಯಾರಿದ್ದಾರೆ? ಯಾರ ಆದೇಶದ ಹಿನ್ನೆಲೆಯಲ್ಲಿ ಈ ಕೆಲಸಗಳು ನಡೆದಿದೆ ಎಂದು ಪ್ರಶ್ನಿಸಿದರು. ಈ ಪ್ರಕರಣದ ವಿಚಾರಣೆ ನಡೆಸುವಂತೆ ಸಿಬಿಐಗೆ ನೀಡಿದ್ದೇ ಸುಪ್ರೀಂ ಕೋರ್ಟ್. ಹೀಗಾಗಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪೊಲೀಸರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಾದಿಸಿದರು.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾಗಿದ್ದ ಅಭಿಷೇಕ್ ಮನು ಸಿಂಘ್ವಿ, ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿಯಾಗಿದೆ. ಪೊಲೀಸರು ಯಾವುದೇ ಸಿಬಿಐ ಅಧಿಕಾರಿಗಳನ್ನು ಬಂಧಿಸಿಲ್ಲ ಮತ್ತು ವಶಕ್ಕೆ ಪಡೆದಿಲ್ಲ, ರಾಜೀವ್ ಕುಮಾರ್ ಅವರು ಹಲವು ಬಾರಿ ತಟಸ್ಥ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸಿಬಿಐಗೆ ಪತ್ರ ಬರೆದಿದ್ದಾರೆ. ರಾಜೀವ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 201(ಪುರಾವೆ ನಾಶ) ಅಡಿಯಲ್ಲಿ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಎಫ್‍ಐಆರ್ ದಾಖಲಾಗದೇ ಬಂಧನ ಮಾಡುವುದು ಎಷ್ಟು ಸರಿ? 5 ವರ್ಷದ ವಿಚಾರಣೆ ನಡೆಯುತ್ತಿದ್ದು ಈಗ ತುರ್ತಾಗಿ ಬಂಧನ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿಗಳು, ನೀವು ಬಹಳ ವಿಚಾರಗಳನ್ನು ಊಹೆ ಮಾಡುತ್ತೀರಿ. ಇದು ನಿಮ್ಮ ಸಮಸ್ಯೆ, ಸಿಬಿಐ ತನಿಖೆಗೆ ರಾಜೀವ್ ಕುಮಾರ್ ಸಹಕರಿಸಬೇಕು ಎಂದು ಸಿಂಘ್ವಿಗೆ ಹೇಳಿದರು.

ಎರಡು ಕಡೆಯ ವಾದವನ್ನು ಅಲಿಸಿದ ಕೋರ್ಟ್ ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ. ರಾಜೀವ್ ಕುಮಾರ್ ಅವರು ಮೇಘಾಲಯದ ಶಿಲ್ಲಾಂಗ್‍ ನ ತಟಸ್ಥ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿ ಮುಂದಿನ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ಈ ವೇಳೆ ನ್ಯಾಯಾಂಗ ನಿಂದನೆ ಕುರಿತ ಅರ್ಜಿಗೆ ಸಂಬಂಧ ಪಟ್ಟಂತೆ ಸಿಬಿಐ ಆರೋಪಗಳಿಗೆ ಫೆ.18ರ ಒಳಗಡೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಿತು.

ವಿಚಾರಣೆ ಫೆ.7ಕ್ಕೆ: ಸಿಬಿಐ ಬಂಧನಕ್ಕೆ ತಡೆ ಕೋರಿ ರಾಜೀವ್ ಕುಮಾರ್ ಪಶ್ಚಿಮ ಬಂಗಾಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಈ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ಹೇಳಿ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *