ಬೆಂಗ್ಳೂರು, ದೆಹಲಿ ಬಳಿಕ ಜೈಪುರದ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ – ಪೊಲೀಸರು ಫುಲ್‌ ಅಲರ್ಟ್‌!

Public TV
2 Min Read

ಜೈಪುರ: ಬೆಂಗಳೂರು, ದೆಹಲಿ ಮಾದರಿಯಲ್ಲೇ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸುಮಾರು 4-5 ಶಾಲೆಗಳಿಗೆ (Jaipur Schools) ಬಾಂಬ್‌ ಬೆದರಿಕೆಯ (Bomb Threat) ಇ-ಮೇಲ್‌ ಬಂದಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತ ಅಧಿಕಾರಿಗಳು ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ, ಕ್ರೈಂ ಬ್ರಾಂಚ್‌ ಅಧಿಕಾರಿ ತಂಡಗಳು ಸ್ಥಳಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿವೆ. ಮತ್ತೊಂದು ಕಡೆ ಇ-ಮೇಲ್‌ ಮೂಲವನ್ನು ಪತ್ತೆಹಚ್ಚಲು ತನಿಖಾ ತಂಡಗಳು ಮುಂದಾಗಿವೆ. ಇದನ್ನೂ ಓದಿ: 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

ಕಳೆದ ಒಂದು ದಿನದ ಹಿಂದೆಯಷ್ಟೇ ದೆಹಲಿಯ ಬುರಾರಿ ಸರ್ಕಾರಿ ಆಸ್ಪತ್ರೆ, ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ (Delhi IGI Airport) ಬಾಂಬ್‌ ಬೆದರಿಕೆ ಬಂದಿತ್ತು. ಇದಕ್ಕೂ ಮುನ್ನ ದೆಹಲಿಯ ಎನ್‌ಸಿಆರ್‌ನಲ್ಲಿ ಸುಮಾರು 130ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿತ್ತು. ಇದೀಗ ಜೈಪುರದಲ್ಲಿ ಬಾಂಬ್‌ ಬೆದರಿಕೆ ಬಂದಿರುವುದು ಸಾರ್ವಜನಿಕರನ್ನು ಆತಂಕಗೊಳಿಸಿವೆ.

ಬಾಂಬ್‌ ಬೆದರಿಕೆ ಕೇಳಿಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ವಿದ್ಯಾರ್ಥಿ ಮತ್ತು ಶಿಕ್ಷಕರನ್ನ ಸ್ಥಳಾಂತರಿಸಿದ್ದಾರೆ. ಇ-ಮೇಲ್‌ ಮೂಲಕ ಬೆದರಿಕೆ ಬಂದಿದ್ದು, ಮೂಲ ಪತ್ತೆಹಚ್ಚಲು ನಮ್ಮ ತಂದ ಮುಂದಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ. ಇದನ್ನೂ ಓದಿ: ಲೂಟಿ, ಹಗರಣ ಮಾಡೋದೇ ಫುಲ್‌ ಟೈಮ್‌ ಬಿಸಿನೆಸ್‌ ಆಗಿದೆ: ಟಿಎಂಸಿ ವಿರುದ್ಧ ಮೋದಿ ಕೆಂಡ

ಬೆದರಿಕೆ ಮೇಲ್‌ನಲ್ಲಿದ್ದ ಸಂದೇಶವೇನು?
ʻನಾನು ನಿಮ್ಮ ಕಟ್ಟಡದೊಳಗೆ ಸ್ಫೋಟಕ ಸಾಧನಗಳನ್ನು ಇರಿಸಿದ್ದೇನೆ. ಮುಂದಿನ ಕೆಲ ಗಂಟೆಯಲ್ಲಿ ಅವೆಲ್ಲವೂ ಸ್ಫೋಟಗೊಳ್ಳುತ್ತವೆ. ಇದು ಬೆದರಿಕೆಯಲ್ಲ, ಬಾಂಬ್ ಅನ್ನು ನಿಶ್ಯಸ್ತ್ರಗೊಳಿಸಲು ನಿಮಗೆ ಕೆಲವು ಗಂಟೆಗಳ ಕಾಲಾವಕಾಶವಿದೆ, ಇಲ್ಲದಿದ್ದರೆ ಕಟ್ಟಡದೊಳಗಿನ ಅಮಾಯಕರ ರಕ್ತವು ನಿಮ್ಮ ಕೈಯಲ್ಲಿರುತ್ತದೆ. ʻಕೋರ್ಟ್ʼ ಎಂಬ ಗುಂಪು ಈ ಹತ್ಯಾಕಾಂಡದ ಹಿಂದೆ ಇದೆ ಎಂದು ಬೆದರಿಕೆ ಮೇಲ್‌ನಲ್ಲಿ ಸಂದೇಶ ಕಳುಹಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿಸಿದೆ.

ಈ ಹಿಂದೆ ದೆಹಲಿಯ ಶಾಲೆಗಳಿಗೆ ರಷ್ಯಾ ಮೂಲದ ಕಂಪನಿಯೊಂದರಿಂದ ಇ-ಮೇಲ್‌ ಬೆದರಿಕೆ ಬಂದಿತ್ತು. ಭಾನುವಾರ ಸ್ವೀಕರಿಸಿದ ಬಾಂಬ್‌ ಬೆದರಿಕೆಯ ಇ-ಮೇಲ್‌ ವಿಳಾಸ ಯುರೋಪ್‌ ಮೂಲದ ಕಂಪನಿಯದ್ದಾಗಿತ್ತು. ಇದೀಗ ಜೈಪುರದ ಶಾಲೆಗಳಿಗೆ ಬಂದ ಇ-ಮೇಲ್‌ ಬೆದರಿಕೆ ವಿಳಾಸವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article