ಬಟ್ಲರ್ ಏಕಾಂಗಿ ಹೋರಾಟ – ರಾಜಸ್ಥಾನಕ್ಕೆ ರೋಚಕ ಜಯ

Public TV
2 Min Read

ಕೋಲ್ಕತಾ: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ನಡುವಿನ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 31ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡ 2 ವಿಕೆಟ್​ಗಳ ರೋಚಕ ಜಯ ಗಳಿಸಿದೆ.‌

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಕೆಕೆಆರ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ, ಸುನಿಲ್‌ ನರೈನ್‌ (109) ಶತಕದ ನೆರವಿನಿಂದ ಎದುರಾಳಿ ತಂಡಕ್ಕೆ 224 ರನ್‌ಗಳ ಗುರಿ ನೀಡಿತು.

ಬಳಿಕ ರನ್‌ ಚೇಸ್‌ಗೆ ಇಳಿದ ಆರ್‌ಆರ್‌ ತಂಡ ಆರಂಭದಲ್ಲೇ ಆಘಾತ ಎದುರಿಸಿತು. 2ನೇ ಓವರ್‌ನ 3ನೇ ಎಸೆತದಲ್ಲಿ 6 ಸಿಡಿಸಿದ ಯಶಸ್ವಿ ಜೈಸ್ವಾಲ್ (19), 5ನೇ ಎಸೆತದಲ್ಲಿ ಸ್ಲಿಪ್ ಫೀಲ್ಡರ್​ಗೆ ಕ್ಯಾಚ್ ನೀಡಿ ಹೊರ ನಡೆದರು. 8 ಎಸೆತಗಳಲ್ಲಿ 12 ರನ್ ತಂಡದ ನಾಯಕ ಸಂಜು ಸ್ಯಾಮ್ಸನ್, 5ನೇ ಓವರ್‌ನ 2ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ರಿಯಾನ್‌ ಪರಾಗ್‌(34) 4 ಬೌಂಡರಿ ಹಾಗೂ ಎರಡು ಸಿಕ್ಸ್‌ ಸಿಡಿಸಿ ಔಟಾದರು. ರೋವ್​ಮನ್ ಪೊವೆಲ್ (26) ರನ್‌ಗಳ ಕೊಡುಗೆ ನೀಡಿ ಔಟಾದರು. ಪಂದ್ಯದ ಕೊನೆಯವರೆಗೂ ಜೋಸ್ ಬಟ್ಲರ್ (60/107) ತಂಡವನ್ನು ಗೆಲ್ಲಿಸಲು ತೀವ್ರ ಹೋರಾಟ ನಡೆಸಿದರು. 9 ಬೌಂಡರಿ ಹಾಗೂ 6 ಸಿಕ್ಸ್‌ ನೆರವಿನಿಂದ ಶತಕ ಸಿಡಿಸಿದ ಬಟ್ಲರ್‌ ತಂಡವನ್ನು ಗೆಲುವಿನ ದಡ ತಲುಪಿಸಿದರು.

ಕೆಕೆಆರ್‌ ಪರ ಬ್ಯಾಟ್‌ ಬೀಸಿದ ಸುನಿಲ್‌ ನರೈನ್‌ 56 ಎಸೆತಗಳಲ್ಲಿ 13 ಬೌಂಡರಿ ಆರು ಸಿಕ್ಸರ್ ಚಚ್ಚುವ ಮೂಲಕ ಆರ್‌ಆರ್‌ ತಂಡದ ಬೌಲರ್‌ಗಳ ಬೆವರಿಳಿಸಿದರು. ಈ ಮೂಲಕ ತಂಡಕ್ಕೆ ಉತ್ತಮ ಬಲ ನೀಡಿದರು. ಉಳಿದಂತೆ ಅಗಕೃಷ್‌ ರಘುವಂಶಿ 30 ರನ್‌ ಗಳಿಸಿದರು. ಕೊನೆಯಲ್ಲಿ ರಿಂಕು ಸಿಂಗ್‌ 9 ಎಸೆತಗಳಲ್ಲಿ ಅಜೇಯ 20 ರನ್‌ ಗಳಿಸಿದರು. ಶ್ರೇಯಸ್‌ ಐಯ್ಯರ್ 7 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಸಿಕ್ಸ್‌ ಸಿಡಿಸಿ‌ 11 ರನ್‌ಗೆ ಸುಸ್ತಾದರು.‌

ಬೌಲ್ಟ್‌ ಎಸೆದ ಮೊದಲ ಓವರ್‌ನ 2ನೇ ಎಸೆತದಲ್ಲಿ ಫಿಲ್‌ ಸಾಲ್ಟ್‌ ನೀಡಿದ ಸುಲಭ ಕ್ಯಾಚ್‌ನ್ನು ಪರಾಗ್‌ ಕೈಚೆಲ್ಲಿದರು. ಜೀವದಾನ ಪಡೆದುಕೊಂಡ ಸಾಲ್ಟ್‌ 13 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 10 ರನ್‌ ಗಳಿಸಿ ಕೈಚೆಲ್ಲಿದರು. ಆಂಡ್ರೆ ರಸೆಲ್ 10 ಎಸೆತಗಳಲ್ಲಿ ಎರಡು ಬೌಂಡರಿ ಬಾರಿಸಿ 13 ರನ್‌ ಗಳಿಸಿ ಔಟಾದರು. ವೆಂಕಟೇಶ್‌ ಐಯ್ಯರ್‌ 6 ಎಸೆತಗಳಿಗೆ ಕೇವಲ 8 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

Share This Article