ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಪಿಸ್ತೂಲ್ ಒದಗಿಸಿದ್ದ ಮಹಿಳೆ ಅರೆಸ್ಟ್

Public TV
2 Min Read

ಜೈಪುರ್: ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪದ ಮೇಲೆ ಮಹಿಳೆ ಒಬ್ಬಳನ್ನು ರಾಜಸ್ಥಾನ (Rajasthan) ಪೊಲೀಸರು  (Police) ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಪೂಜಾ ಸೈನಿ ಎಂದು ಗುರುತಿಸಲಾಗಿದೆ. ಜೈಪುರದ ಜಗತ್‍ಪುರದಲ್ಲಿರುವ ಮಹಿಳೆಯ ಬಾಡಿಗೆ ಫ್ಲಾಟ್‍ನಲ್ಲಿ ಹತ್ಯೆ ಆರೋಪಿ ನಿತಿನ್ ಫೌಜಿಗೆ, ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘವಾಲ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ. ಈ ಬಗ್ಗೆ ಸುಳಿವು ಸಿಕ್ಕದ್ದು ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಪತಿ ಪರಾರಿಯಾಗಿದ್ದಾನೆ ಎಂದು ಜೈಪುರ್‌ನ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ.

ಮೇಘವಾಲ್ ಮೂಲಕ ಫೌಜಿ ದರೋಡೆಕೋರರ ಗುಂಪು ರೋಹಿತ್ ಗೋಡಾರಾ ಜೊತೆ ಸಂಪರ್ಕದಲ್ಲಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನೊಂದಿಗೆ ಸಂಪರ್ಕ ಹೊಂದಿರುವ ಗೋದಾರಾ ಫೇಸ್‍ಬುಕ್‍ನಲ್ಲಿ ಗೊಗಮೆಡಿಯ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಪೋಸ್ಟ್ ಮಾಡಿದ್ದ. ಕರ್ಣಿ ಸೇನಾ ಮುಖ್ಯಸ್ಥ ತಮ್ಮ ಶತ್ರುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆತ ಬರೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಘವಾಲ್ ಆರಕ್ಕೂ ಹೆಚ್ಚು ಪಿಸ್ತೂಲ್‍ಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ. ಇವರಿಂದಲೇ ಹತ್ಯೆ ಆರೋಪಿಗಳು ಪಿಸ್ತೂಲ್‍ಗಳನ್ನು ಪಡೆದಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆ ಪೂಜಾ ಕೂಡ ಭಾಗಿಯಾಗಿದ್ದಾಳೆ. ಅಲ್ಲದೇ ಈ ಫ್ಲಾಟ್‍ನಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ತನಿಖೆಯ ವೇಳೆ ಜೈಪುರದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡೆಸಿದ ಅಪರಾಧ ಕೃತ್ಯಗಳಿಗೆ ದಂಪತಿ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ಆರೋಪಿಗಳು, ಕರ್ಣಿ ಸೇನಾ ಮುಖ್ಯಸ್ಥರಿಗೆ ಪರಿಚಯವಿದ್ದ ನವೀನ್ ಶೇಖಾವತ್ ಎಂಬವರ ಮೂಲಕ ಗೊಗಮೇಡಿ ಅವರ ಮನೆಗೆ ಆರೋಪಿಗಳು ತೆರಳಿದ್ದರು. ಸ್ವಲ್ಪ ಸಮಯ ಮಾತಾಡಿದ ಬಳಿಕ ಅವರ ಮೇಲೆ ಗುಂಡು ಹಾರಿಸಿ ಅವರನ್ನು ಹತೈಗೈದಿದ್ದರು. ಬಳಿಕ ಅಲ್ಲಿಯೇ ಇದ್ದ ನವೀನ್ ಶೇಖಾವತ್ ಮೇಲೆ ಸಹ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದರು.

ಪ್ರಕರಣ ಪ್ರಮುಖ ಆರೋಪಿಗಳಾದ ಶಾರ್ಪ್ ಶೂಟರ್ ನಿತಿನ್ ಫೌಜಿ, ರೋಹಿತ್ ರಾಥೋಡ್ ಮತ್ತು ಸಹಚರ ಉಧಮ್ ಸಿಂಗ್‍ನನ್ನು ರಾಜಸ್ಥಾನ ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಚಂಡೀಗಢದ ಸೆಕ್ಟರ್ 22ರಿಂದ ಶನಿವಾರ ಬಂಧಿಸಿದ್ದರು. ಆರೋಪಿಗಳನ್ನು ನ್ಯಾಯಾಲಯ ಏಳು ದಿನಗಳ ಕಾಲ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

Share This Article