ಈ ವ್ಯಕ್ತಿಯ ದೇಹದೊಳಗಿದ್ದ 75 ಗುಂಡುಸೂಜಿಗಳನ್ನ ನೋಡಿ ವೈದ್ಯರೇ ಶಾಕ್ ಆದ್ರು!

Public TV
2 Min Read

ಜೈಪುರ್: ಊಟ ಮಾಡ್ಬೇಕಾದ್ರೆ ಅನ್ನ ಗಂಟಲಲ್ಲಿ ಸಿಕ್ಕಿಕೊಂಡ್ರೆ ಜೀವ ಹೋದಂಗೆ ಆಗುತ್ತೆ. ಅಂಥದ್ರಲ್ಲಿ ಗಂಟಲಲ್ಲಿ ಗುಂಡುಸೂಜಿ ಸಿಕ್ಕಾಕ್ಕೊಂಡ್ರೆ ಏನಾಗ್ಬೇಡ. ಆದ್ರೆ ಬರೋಬ್ಬರಿ 40 ಗುಂಡುಸೂಜಿಗಳು ರಾಜಸ್ಥಾನದ ವ್ಯಕ್ತಿಯೊಬ್ಬರ ಗಂಟಲಲ್ಲೇ ಇತ್ತು ಅಂದ್ರೆ ನೀವು ನಂಬಲೇಬೇಕು.

ಹೌದು. ರಾಜಸ್ಥಾನ ಮೂಲದ ರೈಲ್ವೆ ನೌಕರರಾದ 56 ವರ್ಷದ ಬದ್ರಿಲಾಲ್ ಮೀನಾ ಎಂಬ ವ್ಯಕ್ತಿ ಫೆಬ್ರವರಿ ತಿಂಗಳಲ್ಲಿ ಕಾಲುಬೆರಳಿನ ಸೋಂಕಿನಿಂದ ಆಸ್ಪತ್ರೆಗೆ ತೆರಳಿದ್ದರು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ನನ್ನ ಕಾಯಿಲೆ ಗುಣವಾಯಿತು ಅಂದುಕೊಂಡಿದ್ರು. ಆದ್ರೆ ಏಪ್ರಿಲ್‍ನಲ್ಲಿ ವೈದ್ಯರು ಬದ್ರಿಲಾಲ್ ಅವರ ಎಕ್ಸ್ ರೇ ತೆಗೆದಾಗ ದೊಡ್ಡ ಶಾಕ್ ಕಾದಿತ್ತು. ಬದ್ರಿಲಾಲ್ ಅವರ ದೇಹಲ್ಲಿ ಒಟ್ಟು 75 ಪಿನ್(ಗುಂಡುಸೂಜಿ) ಗಳಿರುವುದು ಪತ್ತೆಯಾಗಿತ್ತು. ಆದ್ರೆ ಈ ಪಿನ್‍ಗಳು ಹೇಗೆ ಅವರ ದೇಹದೊಳಗೆ ಹೊಕ್ಕಿದೆ ಎಂಬುವುದು ಮಾತ್ರ ತಿಳಿದಿಲ್ಲ.

ಈ ಬಗ್ಗೆ ಆತಂಕಗೊಂಡ ಬದ್ರಿಲಾಲ್ ಕುಟುಂಬ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ರೈಲ್ವೆ ಸಿಬ್ಬಂದಿಯಾಗಿರೋದ್ರಿಂದ ಕೊನೆಗೆ ಬದ್ರಿಲಾಲ್ ಅವರಿಗೆ ಮುಂಬೈ ರೈಲ್ವೇ ಆಸ್ಪತ್ರೆಗೆ ಗೊತ್ತು ಮಾಡಿದ್ರು. ಅಂತೆಯೇ ಏಪ್ರಿಲ್ 24 ರಂದು ಮುಂಬೈನಲ್ಲಿರೋ ಜಗಜೀವನ್ ರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮತ್ತೆ ಎಕ್ಸ್ ರೇ ತೆಗೆಸಿದ್ರು. ಈ ವೇಳೆ ಬದ್ರಿಲಾಲ್ ಅವರ ಗಂಟಲಲ್ಲಿ 40, ಬಲಗಾಲಿನಲ್ಲಿ 25, ಎರಡೂ ಕೈಗಳಲ್ಲಿ 2, ಹೀಗೆ ದೇಹದೊಳಗೆ ಒಟ್ಟು 75 ಗುಂಡು ಸೂಜಿಗಳಿರುವುದು ಬೆಳಕಿಗೆ ಬಂದಿತ್ತು.

ಬದ್ರಿಲಾಲ್ ಅವರು ಕಾಲಿನಲ್ಲಿ ನೋವಿರುವ ಬಗ್ಗೆ 4 ತಿಂಗಳಿನಿಂದ ಹೇಳುತ್ತಿದ್ದರು. ನಂತರ ರಾಜಸ್ಥಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾದ ದೇಹದಲ್ಲಿ ಗುಂಡುಸೂಜಿಗಳಿರುವ ಬಗ್ಗೆ ಗೊತ್ತಾಯಿತು. ಚಿತ್ರಗಳನ್ನ ನೋಡಿ ನಮಗೆ ಭಯವಾಯ್ತು. ಪಿನ್‍ಗಳು ಹೇಗೆ ಅವರ ದೇಹದೊಳಗೆ ಹೋದವು ಎಂಬುದು ಗೊತ್ತಿಲ್ಲ. ನಾವು ಅವರನ್ನ ಹಲವು ಬಾರಿ ಈ ಬಗ್ಗೆ ಕೇಳಿದೆವು. ಆದ್ರೆ ಅವರಿಗೆ ಅದರ ನೆನಪಿಲ್ಲ ಎಂದು ಬದ್ರಿಲಾಲ್ ಅವರ ಮಗ ರಾಜೇಂದ್ರ ಹೇಳಿದ್ದಾರೆ.

ವೈದ್ಯರು ಏನು ಹೇಳಿದ್ರು?: ಅಚ್ಚರಿಯೆಂಬಂತೆ ಬದ್ರಿಲಾಲ್ ಅವರ ದೇಹದೊಳಗಿರುವ ಗುಂಡುಸೂಜಿಗಳಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ. ಜಾಗೃತ ಮನಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಇಷ್ಟೊಂದು ಪಿನ್‍ಗಳನ್ನ ನುಂಗುವುದು ಸಾಧ್ಯವೇ ಇಲ್ಲ. ಪಿನ್ ಹೊರತೆಗೆಯಲು ಆಪರೇಷನ್ ಮಾಡಬೇಕು. ಆದ್ರೆ ಇವರಿಗೆ ಸಕ್ಕರೆ ಕಾಯಿಲೆ ಇರೋದ್ರಿಂದ ಮತ್ತೊಂದು ಆಪರೇಷನ್ ಮಾಡೋದು ಸ್ವಲ್ಪ ಕಷ್ಟವಾಗಬಹುದು. ಇವರ ದೇಹದ ಸ್ಥಿತಿ ಬಗ್ಗೆ ನಿರ್ದಿಷ್ಟವಾಗಿ ತಿಳಿಯಲು ಇಎನ್‍ಟಿ ಪರೀಕ್ಷೆಗಾಗಿ ನಾಯರ್ ಆಸ್ಪತ್ರೆಗೆ ಕಳಿಸಿದ್ದೇವೆ. ಮುಂದಿನ ಚಿಕಿತ್ಸೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜಗಜೀವನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅಲ್ಲದೇ ಕಳೆದ 5 ದಿನಗಳಿಂದ ಅಪ್ಪನ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದೇವೆ. ಆದ್ರೆ ಅವರ ಚಿಕಿತ್ಸೆಗೆ ವೈದ್ಯರು ಇನ್ನೂ ನಿರ್ದಿಷ್ಟವಾಗಿ ಯೋಜನೆ ಮಾಡಿಲ್ಲ. ಎರಡು ದಿನಗಳ ಹಿಂದೆ ನನ್ನ ತಂದೆ ಮಾತನಾಡುತ್ತಿದ್ರು. ಈಗ ಗಂಟಲು ನೋವಿನಿಂದ ಆಹಾರ ಸೇವನೆ, ನೀರು ಕುಡಿಯುವುದು ಕೂಡ ನಿಲ್ಲಿಸಿದ್ದಾರೆ. ಉಸಿರಾಟಕ್ಕೂ ಕಷ್ಟಪಡುತ್ತಿದ್ದಾರೆ ಅಂತಾ ರಾಜೇಂದ್ರ ಆರೋಪಿಸಿದ್ದಾರೆ.

ಬದ್ರಿಲಾಲ್ ಮೀನಾ ಮಗ ರಾಜೇಂದ್ರ
Share This Article
Leave a Comment

Leave a Reply

Your email address will not be published. Required fields are marked *