ರಾಜಸ್ಥಾನ | ʻಕೈʼ ಶಾಸಕನನ್ನು ಗುರಿಯಾಗಿಸಿಕೊಂಡು ಒಂದೇ ತಿಂಗಳಲ್ಲಿ ಮೂರು ಬಾರಿ ಕಳ್ಳತನ!

Public TV
1 Min Read

ಜೈಪುರ್‌: ರಾಜಸ್ಥಾನದ (Rajasthan) ದೌಸ್‌ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ದೀನ್ ದಯಾಳ್ ಬೈರ್ವಾ (Deen Dayal Bairwa) ಅವರನ್ನು ಗುರಿಯಾಗಿಸಿಕೊಂಡು, ಕಳ್ಳರು ಒಂದು ತಿಂಗಳೊಳಗೆ ಮೂರು ಬಾರಿ ಅವರ ಮನೆಯಲ್ಲಿ ಕಳ್ಳತನವೆಸಗಿದ್ದಾರೆ. ಮೊದಲು ಮೊಬೈಲ್ ಫೋನ್, ನಂತರ ಬೈಕ್ ಮತ್ತು ಈಗ ಟ್ರ್ಯಾಕ್ಟರ್ ಟ್ರಾಲಿಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ, ದೌಸಾದಲ್ಲಿರುವ ತಮ್ಮ ನಿವಾಸದಿಂದ ಭಾನುವಾರ ರಾತ್ರಿ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನವಾಗಿದೆ. ಶಾಸಕರ ಮನೆಯಲ್ಲೇ ಕಳ್ಳರು ಈ ರೀತಿ ಕಳ್ಳತನ ಮಾಡುತ್ತಿದ್ದಾರೆ ಎಂಬುದು ಗಂಭೀರ ವಿಷಯ. ಇದು ಪೊಲೀಸರ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ. ನಮ್ಮ ಮನೆಯಲ್ಲೇ ಹೀಗಾದ್ರೆ ಸಾಮಾನ್ಯ ಜನರನ್ನು ಪೊಲೀಸರು ಹೇಗೆ ರಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

ಜೂ.11 ರಂದು ದೌಸಾದಲ್ಲಿ ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ಅವರ 25 ನೇ ಪುಣ್ಯತಿಥಿಯಂದು ನಡೆದ ಸಭೆಯಲ್ಲಿ ಫೋನ್‌ ಕಳ್ಳತನವಾಗಿತ್ತು. ಸ್ವಲ್ಪ ದಿನಗಳ ನಂತರ ಅವರ ಮನೆಯಲ್ಲಿ ಬೈಕ್‌ ಕಳ್ಳತನವಾಗಿತ್ತು. ಇದೀಗ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನವಾಗಿದೆ. ಇದಕ್ಕೂ ಮೊದಲು ನನ್ನಿಂದ ಒಂದು ಮೊಳೆ ಸಹ ಕಳ್ಳತನ ಆಗಿರಲಿಲ್ಲ. ದುರಾದೃಷ್ಟವಶಾತ್‌ ಬೈಕ್‌ ಕಳ್ಳತನ ಆದ ದಿನ ಸಿಸಿಟಿವಿ ಸರಿ ಇರಲಿಲ್ಲ. ಅದು ಸರಿ ಇದ್ದರೂ ಕಳ್ಳರು ಮುಖ ಮುಚ್ಚಿಕೊಂಡು ಬಂದು ಕದ್ದೊಯ್ಯುವ ಸಾಧ್ಯತೆಯು ಇದೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೌಸಾ ಪೊಲೀಸ್ ವರಿಷ್ಠಾಧಿಕಾರಿ ಸಾಗರ್, ಟ್ರ್ಯಾಕ್ಟರ್-ಟ್ರಾಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ದೂರು ಬಂದಿಲ್ಲ. ಮೊಬೈಲ್ ಕಳ್ಳತನದ ಬಗ್ಗೆ ನಮಗೆ ದೂರು ಬಂದಿದೆ. ಎಫ್‌ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿರುವ ಬೈರ್ವಾ, ಕಳೆದ ನವೆಂಬರ್‌ನಲ್ಲಿ ಮುರಾರಿ ಲಾಲ್ ಮೀನಾ ಲೋಕಸಭೆಗೆ ಆಯ್ಕೆಯಾದ ನಂತರ ದೌಸಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

Share This Article