ಅನಸ್ತೇಶಿಯಾಕ್ಕೆ ಮಹಿಳಾ ಅಧಿಕಾರಿ ಬಲಿ – ಸಿಬಿಐ ತನಿಖೆಗೆ ಆಗ್ರಹಿಸಿದ ಕುಟುಂಬ

Public TV
1 Min Read

ಜೈಪುರ್: ವೈದ್ಯರ ನಿರ್ಲಕ್ಷ್ಯದಿಂದ ರಾಜಸ್ಥಾನದ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ಜೋಧ್‍ಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದ ಪ್ರಿಯಾಂಕಾ ಬಿಷ್ಣೋಯ್ (33) ಅವರು ಜೋಧ್‍ಪುರದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

2016 ರ ಬ್ಯಾಚ್ ರಾಜಸ್ಥಾನ ಆಡಳಿತ ಸೇವೆಗಳ ಅಧಿಕಾರಿ ಜೋಧ್‍ಪುರದ ವಸುಂಧರಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಅರಿವಳಿಕೆ ನೀಡಿದ ನಂತರ ಮಹಿಳೆ ಕೋಮಾಗೆ ಹೋಗಿದ್ದರು ಎಂದು ಕುಟುಂಬ ಆರೋಪಿಸಿದೆ.

ಬಿಷ್ಣೋಯ್ ಸಮುದಾಯದ ಮುಖಂಡ ದೇವೇಂದ್ರ ಬುಡಿಯಾ ಅವರು ಅಧಿಕಾರಿಯ ಸಾವಿನ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಕುಟುಂಬಸ್ಥರು ಸಹ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಜೋಧಪುರ ಜಿಲ್ಲಾಧಿಕಾರಿ ಗೌರವ್ ಅಗರವಾಲ್ ಅವರು ಐವರು ಅಧಿಕಾರಿಗಳ ತಂಡದಿಂದ ತನಿಖೆಗೆ ಆದೇಶಿಸಿದ್ದಾರೆ.

ಪ್ರಿಯಾಂಕಾ ಬಿಷ್ಣೋಯ್, ಒಮ್ಮೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತಾನು 8ನೇ ತರಗತಿಯಲ್ಲಿದ್ದಾಗ ಉಪವಿಭಾಗಾಧಿಕಾರಿಯೊಬ್ಬರು ತಮ್ಮ ಶಾಲೆಗೆ ಭೇಟಿ ನೀಡಿದ ನಂತರ ತಾನು ಆಡಳಿತಾಧಿಕಾರಿಯಾಗಲು ನಿರ್ಧರಿಸಿದ್ದೆ ಎಂದು ಹೇಳಿಕೊಂಡಿದ್ದರು.

Share This Article