ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

Public TV
2 Min Read

ಹೈದರಾಬಾದ್: ಇಷ್ಟು ದಿನ ತೆಲುಗು ನಟರ ನಡುವೆ ಸಾಮರಸ್ಯವಿದೆ. ಆಂತರಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಕ್ಕು ನಲಿಯುತ್ತಾರೆ ಎಂಬ ಮಾತಿತ್ತು. ಆದರೆ ಅದು ಈಗ ಸುಳ್ಳಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ನಡುವಿನ ಅಂತರ್ಯುದ್ಧ ಬೀದಿಗೆ ಬಂದಿದೆ.

ಟಾಲಿವುಡ್‍ನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಯಕ ನಟ ರಾಜಶೇಖರ್ ನಡುವೆ ನೇರಾನೇರ ಕಿತ್ತಾಟ ನಡೆದಿದೆ. ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಗಲಾಟೆ ಆಗಿದೆ. ‘ಮಾ’ ಸಂಸ್ಥೆಯ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಹಿರಿಯ ನಟ ಮತ್ತು ಸ್ಕ್ರಿಪ್ಟ್ ರೈಟರ್ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ ‘ಮಾ’ ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡರು. ಫಿಲಂ ಸ್ಟೈಲಲ್ಲಿ ವೇದಿಕೆ ಮೇಲೆ ಕುಳಿತಿದ್ದ ಮೆಗಾ ಸ್ಟಾರ್ ಚಿರಂಜೀವಿ, ಡೈಲಾಗ್ ಕಿಂಗ್ ಮೋಹನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು ಕಾಲಿಗೆ ನಮಸ್ಕರಿಸಿದರು.

‘ಮಾ’ನಲ್ಲಿ ಎಲ್ಲವೂ ಸರಿ ಇಲ್ಲ. ಗಲಾಟೆಗಳು ನಡೆಯುತ್ತಿವೆ. ಓಪನ್ ಆಗಿ ಮಾತನಾಡಲು ಯಾರಿಗೂ ಅವಕಾಶವೇ ಕೊಡುತ್ತಿಲ್ಲ. ಎಲ್ಲರೂ ಜೊತೆ ಜೊತೆಯಲ್ಲೇ ನಡೆಯಬೇಕೆಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಹೇಳುತ್ತಾರೆ. ಆದರೆ, ಕೆಂಡವನ್ನು ಮುಚ್ಚಿಟ್ಟರೆ ಏನಾಗುತ್ತೆ? ಹೊಗೆ ಬಾರದೇ ಇರುತ್ತಾ ಎಂದು ರಾಜಶೇಖರ್ ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದರು.

ಈ ವೇಳೆ ಮಧ್ಯೆ ಮಾತನಾಡಲು ಚಿರಂಜೀವಿ ಪ್ರಯತ್ನ ಮಾಡಿದರೂ, ನಟ ರಾಜಶೇಖರ್ ಅವಕಾಶ ಕೊಡಲಿಲ್ಲ. ಮತ್ತೋರ್ವ ಹಿರಿಯ ನಟ ಮೋಹನ್ ಬಾಬು, ಮಾತು ನಿಲ್ಲಿಸಿ ಎಂದರೂ ನಟ ರಾಜಶೇಖರ್ ಸುಮ್ಮನಾಗಲಿಲ್ಲ. ಕಳೆದ ಮಾರ್ಚ್ ನಲ್ಲಿ ‘ಮಾ’ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆ ಆದ ಕ್ಷಣದಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಆಗಿಲ್ಲ. ಇತ್ತೀಚೆಗೆ ನನ್ನ ಆಡಿ ಕಾರು ಅಪಘಾತಕ್ಕೂ ಇದೇ ಕಾರಣ. ನಿತ್ಯ ನನ್ನ ಮನೆಯಲ್ಲಿ ಗಲಾಟೆಗಳು ನಡೆಯುತ್ತಿವೆ. `ಮಾ’ಗಾಗಿ ಯಾಕೆ ಅಷ್ಟೊಂದು ದುಡಿಯುತ್ತಿದ್ದೀಯಾ..? ಅಂತ ಬೈಯ್ತಿದ್ದಾರೆ. ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಕೆಲಸ ಮಾಡುತ್ತಿರುವ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಎಲ್ಲರ ಮುಂದೆಯೇ ನೇರವಾಗಿ ವಾಗ್ದಾಳಿ ನಡೆಸಿದರು. ಈ ಮೂಲಕ ಚಿರಂಜೀವಿಗೆ ನೇರವಾಗಿ ಡಿಚ್ಚಿಕೊಟ್ಟರು.

ಇದರಿಂದ ಚಿರಂಜೀವಿ ತೀವ್ರ ಮುಜುಗರಕ್ಕೆ ಒಳಗಾದರು. ಆದರೂ ಸಾವರಿಸಿಕೊಂಡು ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಿಲ್ಲ. ನಮ್ಮ ಮಾತಿಗೆ, ತಮ್ಮ ಹಿರಿತನಕ್ಕೆ ಬೆಲೆ ಇಲ್ಲ ಎಂದರೇ ನಾವೇಕೆ ಇಲ್ಲಿ ಇರಬೇಕು. ಸಭೆಗೆ ಗೌರವ ಕೊಡದೇ ರಾಜಶೇಖರ್ ಮೈಕ್ ಎಳೆದುಕೊಂಡು ಮಾತನಾಡಿದ್ದು ಸರಿಯಲ್ಲ. ಈಗಲೂ ನಾವು ಸ್ಪಂದಿಸದಿದ್ದರೆ ನಮ್ಮ ಹಿರಿತನಕ್ಕೆ ಬೆಲೆ ಇರಲ್ಲ. ರಾಜಶೇಖರ್ ವಿರುದ್ಧ ‘ಮಾ’ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲೇಬೇಕು ಎಂದು ಚಿರಂಜೀವಿ ಆಗ್ರಹಿಸಿದರು.

ಈ ಬೆನ್ನಲ್ಲೇ ರಾಜಶೇಖರ್ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದರು. ಕೊನೆಗೆ ಮಾ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು. ತಮಗೆ ಚಿರಂಜೀವಿ ಮೇಲೆ ಕೋಪ ಇಲ್ಲ. ಅಧ್ಯಕ್ಷ ನರೇಶ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ ಎಂದು ಟ್ವೀಟ್ ಮಾಡಿದ ರಾಜಶೇಖರ್, ಚಿರಂಜೀವಿ ಅವರಲ್ಲಿ ಕ್ಷಮೆ ಕೂಡ ಕೇಳಿದರು. ಆದರೆ ಅಷ್ಟೊತ್ತಿಗೆ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಟಾಲಿವುಡ್‍ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಟಾಬಯಲಾಯ್ತು.

Share This Article
Leave a Comment

Leave a Reply

Your email address will not be published. Required fields are marked *